ರಾಮಚಂದ್ರಪುರ ಮಠದಲ್ಲಿ ‘ಕನ್ಯಾ ಸಂಸ್ಕಾರ’ ವಿರೋಧಿಸಿ ಬಹುಜನ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

Update: 2017-08-20 15:01 GMT

ಬೆಂಗಳೂರು, ಆ.20: ಇಲ್ಲಿನ ಗಿರಿನಗರದಲ್ಲಿನ ರಾಮಚಂದ್ರಾಪುರ ಮಠದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಮಂತ್ರೋಪದೇಶ ನೀಡಲಾಗುತ್ತದೆ ಎನ್ನಲಾದ ‘ಕನ್ಯಾ ಸಂಸ್ಕಾರ’ ಕಾರ್ಯಕ್ರಮವನ್ನು ವಿರೋಧಿಸಿ ಬಹುಜನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಮಠದ ಭಕ್ತರೊಂದಿಗೆ ತೀವ್ರ ವಾಗ್ವಾದ ನಡೆದಿದೆ.

ರವಿವಾರ ಬೆಳಗ್ಗೆ ಗಿರಿನಗರದಲ್ಲಿ ರಾಮಚಂದ್ರಾಪುರ ಮಠದಲ್ಲಿ ‘ಕನ್ಯಾ ಸಂಸ್ಕಾರ’ ಕಾರ್ಯಕ್ರಮದ ಮಾಹಿತಿ ತಿಳಿದ ಬಹುಜನ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಮಠಕ್ಕೆ ಭೇಟಿ ನೀಡಿ ಈ ಕುರಿತು ಮಾಹಿತಿ ಕೇಳಲು ಮುಂದಾದರು. ಆದರೆ, ಈ ವೇಳೆ ಮಠದಲ್ಲಿದ್ದ ಭಕ್ತರು, ಕಾರ್ಯಕರ್ತರಿಗೆ ಅಡ್ಡಿ ಪಡಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು.

ಆಕ್ರೋಶಗೊಂಡ ಕಾರ್ಯಕರ್ತರು ಮಠದ ಮುಂದೆ ಪ್ರತಿಭಟನೆ ನಡೆಸಿ, ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಹಾಗೂ ಮಠದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಭಾರತಿ ಸ್ವಾಮಿ  ಹದಿಹರೆಯದ ಯುವತಿಯರೊಂದಿಗೆ ಏಕಾಂತ ಉಪದೇಶ ಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆ ಕಾರ್ಯದರ್ಶಿ ಭೀಮಪುತ್ರಿ ರೇವತಿ ರಾಜ್ ಮಾತನಾಡಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಆರೋಪಿಯೊಬ್ಬರು ಹದಿಹರೆಯದ ಯುವತಿಯರಿಗೆ ‘ಕನ್ಯಾ ಸಂಸ್ಕಾರ’ ನೆಪದಲ್ಲಿ ಉಪದೇಶ ನೀಡುವುದು ಅನುಮಾನಕರ. ಹೀಗಾಗಿ ಅದನ್ನು ಪ್ರಶ್ನಿಸಲು ಮಠಕ್ಕೆ ತೆರಳಿದ್ದವು. ಆದರೆ, ಮಠದಲ್ಲಿ ಭಕ್ತರ ವೇಷದಲ್ಲಿದ್ದ ಗೂಂಡಾಗಳು ನಮ್ಮ ಮೇಲೆ ತಿರುಗಿಬಿದ್ದರು. ಒಂದು ಹಂತದಲ್ಲಿ ಪ್ರಶ್ನಿಸಿದರು. ಅಲ್ಲದೆ, ವಾಗ್ವಾದ ನಡೆಸಿ "ನಿಮಗೆ ಇಲ್ಲೇನು ಕೆಲಸ ಹೋಗಿ" ಎಂದು ಬೆದರಿಕೆ ದಾಟಿಯಲ್ಲಿ ಗದರಿದರು. ಅತ್ಯಾಚಾರ ಆರೋಪ ಎದುರಿಸುತ್ತಿರುವ ಶ್ರೀಗಳಿಗೆ ‘ಕನ್ಯಾ ಸಂಸ್ಕಾರ’ ನಡೆಸುವ ಯಾವುದೇ ನೈತಿಕತೆಯಿಲ್ಲ ಎಂದರು.

ಅವರು ಮೊದಲು ಅತ್ಯಾಚಾರ ಆರೋಪದಿಂದ ಮುಕ್ತರಾಗಲಿ. ನಂತರ ಕನ್ಯಾ ಸಂಸ್ಕಾರ ನಡೆಸಲಿ. ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಗುಪ್ತವಾಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಆ ಮೂಲಕ ಮಠದ ಭಕ್ತರು ಹಾಗೂ ಜನ ಸಾಮಾನ್ಯರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಭೀಮಪುತ್ರಿ ರೇವತಿ ರಾಜ್  ದೂರಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಆರ್.ಎಂ.ಎನ್.ರಮೇಶ್, ಮುಖಂಡರಾದ ಸತೀಶ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News