ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ

Update: 2017-08-21 03:22 GMT

ಕತರ್, ಆ. 21: ಕತರ್ ಇಂಡಿಯನ್ ಸೋಶಿಯಲ್ ಫೋರಮ್ ನ ಕರ್ನಾಟಕ ಮತ್ತು ದೆಹಲಿ ಘಟಕವು ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಯು ಆ.18ರಂದು ನವ ಸಲಾತಾದಲ್ಲಿರುವ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೌಲ್ವಿ ತಯ್ಯಬ್ ಸಲಫಿ ಖಿರಾತ್ ಪಾರಾಯಣದೊಂದಿಗೆ ನೆರವೇರಿಸಿದರು.

ಸೋಶಿಯಲ್ ಫೋರಂನ ಕರ್ನಾಟಕ ಘಟಕದ ಅಧ್ಯಕ್ಷ ನಝೀರ್ ಪಾಷಾ ಮಾತನಾಡುತ್ತ, ಭಾರತವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರ, ವಿವಿಧತೆಯಲ್ಲಿ ಐಕ್ಯತೆ ಎಂಬ ಬಿರುದು ಭಾರತಕ್ಕಿದೆ. ಆದರೆ ಸ್ವಾತಂತ್ರ್ಯವು ಬ್ರಿಟಿಷ್ ಶೋಷಕರಿಂದ ಭಾರತೀಯ ಶೋಷಕರಿಗೆ ಹಸ್ತಾಂತರವಾ ದ್ದರಿಂದ ದೇಶದಲ್ಲಿ ಇಂದಿಗೂ ಆರ್ಥಿಕ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವು ಕೇವಲ ಕೆಲವು ಸಮುದಾಯಗಳಿಗೆ ಮಾತ್ರ ಮೀಸಲಾಗಿದೆ ಹಾಗೂ ಭಾರತದ ಇತಿಹಾಸದ ಪುಟಗಳು ಕೇಸರೀಕರಣಗೊಂಡಿವೆ. ಭಾರತವು ಕೇವಲ ಒಂದೇ ಒಂದು ಸಮುದಾಯದ್ದಂತೂ ಅಲ್ಲವೇ ಅಲ್ಲ. ಭಾರತ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಲ್ಲರನ್ನು ಒಳಗೊಂಡ ಭಾರತೀಯರದ್ದು ಎಂದು ಹೇಳಿದರು.

ಮುಖ್ಯ ಭಾಷಣಕಾರರಾದ ಅನ್ವರ್ ಸಾದಾತ್ ಬಜತ್ತೊರ್ ಮಾತನಾಡಿ, ಭಾರತಕ್ಕೆ ಬಂದ ಡಚ್ಚರು, ಪೋರ್ಚುಗೀಸರು ಹಾಗೂ ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟೀಷರು ಭಾರತವನ್ನು ಲೂಟಿ ಮಾಡಿ, ಸಣ್ಣ ಪುಟ್ಟ ರಾಜರುಗಳನ್ನು  ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದರು. ಆ ರಾಜರೂ ಕೂಡ ಬ್ರಿಟಿಷರಿಗೆ ಕಪ್ಪಕಾಣಿಕೆ ಅರ್ಪಿಸಿ, ಬ್ರಿಟಿಷರಿಗೆ ಶರಣಾಗಿ, ಅವರೊಂದಿಗೆ ಒಪ್ಪಂದದ ಹೊಂದಾಣಿಕೆ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕು, ಅವರ ವಿರುದ್ಧ ದಂಗೆ ಏಳಬೇಕು, ಬ್ರಿಟಿಷರನ್ನು ಭಾರತದ ನೆಲದಿಂದ ಓಡಿಸಬೇಕೆಂಬ ಚಿಂತನೆ ಯಾರಲ್ಲಿಯೂ ಇರದಂತಹ ಸಂದರ್ಭದಲ್ಲಿ ಕೇರಳದ ಕಲ್ಲಿಕೋಟೆಯ ಕಡಲ ಕಿನಾರೆಯಲ್ಲಿ ಕುಂಞಯೀ ಮರಕ್ಕಾರ್ ರಂತಹ ಮುಸ್ಲಿಮ್ ಸಮುದಾಯದಿಂದ ಆರಂಭಗೊಂಡ ಈ ಒಂದು ಸ್ವಾತಂತ್ರ್ಯದ ಕಿಚ್ಚು ನಂತರ 1780ರ ಸುಮಾರಿಗೆ ಮೈಸೂರಿನ ರಾಜ ಹೈದರಾಲಿ ಮತ್ತು ಅವರ ಪುತ್ರ ಟಿಪ್ಪು ಸುಲ್ತಾನ್ ಆ ಹೋರಾಟವನ್ನು ಮುಂದುವರೆಸಿಕೊಂಡು ಬಂದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರೂ ಹಾಗೂ ಕತರ್ ಇಂಡಿಯನ್ ಸೋಶಿಯಲ್ ಘೋರಂ ಕೇಂದ್ರ ವಲಯದ ಅಧ್ಯಕ್ಷ  ಅಝೀಝ್ ಸುಭಾನ್ ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿ, ದೇಶದಲ್ಲಿರುವ ಸರ್ಕಾರವು ನಮೋ ಹೆಸರಿನಲ್ಲಿ ಇಂದಿನವರೆಗೂ ಜನರಿಗೆ ಮೋಸ ಮಾಡಿ, ಭಾರತೀಯರ ಕಷ್ಟಗಳಿಗೆ ಸ್ಪಂದಿಸದೆ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದರು.

ಕತರ್ ಇಂಡಿಯನ್ ಸೋಶಿಯಲ್ ಫೋರಮ್ ನ ಉತ್ತರ ವಲಯದ ಅಧ್ಯಕ್ಷ ವಾಸೀಮ್ ಖಾಝಿ ಭಾರತದ ಸಂವಿಧಾನದ ಬಗ್ಗೆ ಮಾತನಾಡಿದರು. 

 ಅಬ್ದುಲ್ ಮಾಲಿಕ್ ಖಾಝಿ, ಉಮರ್ ಸಲತ್ತೊರ್ ಮತ್ತು ನೌಶಾದ್ ಅವರು ದೇಶಭಕ್ತಿ ಗೀತೆಗಳನ್ನು ಹಾಡಿದರು.

ಮುಖ್ಯ ಅತಿಥಿಗಳಾಗಿ ಕತರ್ ಇಂಡಿಯನ್ ಫ್ರಟೆರ್ನಿಟಿ ಫೋರಮ್ ನ ಕರ್ನಾಟಕ ಘಟಕದ ಅಧ್ಯಕ್ಷ ಲತೀಫ್ ಮಡಕೇರಿ ಮತ್ತು ದೆಹಲಿ ಘಟಕದ ಅಧ್ಯಕ್ಷ  ಜಾಫರ್ ಅಹ್ಮದ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಭಾಷಣವನ್ನು ಇರ್ಷಾದ್ ಕುಳಾಯಿ ಮತ್ತು ಕಾರ್ಯಕ್ರಮದ ಸಮಾರೋಪವನ್ನು ಅಬ್ದುಲ್ ಖಾದಿರ್ ಮಂಡಿಸಿದರು. ಕಾರ್ಯಕ್ರಮದ ಸಿದ್ಧತೆಗಳ ಮೇಲ್ವಿಚಾರಣೆಯನ್ನು ಪ್ರಾರಂಭದಿಂದ ಕೊನೆಯವರೆಗೂ ತಮ್ಮ ಸಿಬ್ಬಂದಿಯೊಂದಿಗೆ ಗುಲಾಮ್ ರಸೂಲ್ ವಹಿಸಿದ್ದರು. ಸೈಯದ್ ಕಲೀಮ್ ಖಾದ್ರಿ ಕಾರ್ಯಕ್ರಮ ನಿರೂಪಿಸಿದರು.

Writer - ಖಲಂದರ್ ಜಾಲ್ಸೂರ್

contributor

Editor - ಖಲಂದರ್ ಜಾಲ್ಸೂರ್

contributor

Similar News