ಭಿಕ್ಷೆ ಬೇಡುವುದಕ್ಕಾಗಿ ನಾನೇ ನನ್ನ ಕಾಲನ್ನು ಕತ್ತರಿಸಿದ್ದೇನೆ ಎಂದು ಜನರು ಹೇಳುತ್ತಾರೆ: ಬಬ್ಲಿ ಬೇಗಂ

Update: 2017-08-21 07:43 GMT

ಒಂದು ರೈಲು ಅಪಘಾತ ನನ್ನ ಜೀವನ, ನನ್ನ ಕನಸು ಹಾಗೂ ಎಲ್ಲವನ್ನೂ ಬದಲಾಯಿಸಿ ಬಿಟ್ಟಿತು. ರೈಲಿನ ಮೇಲಿನಿಂದ ನಾನು ಪಕ್ಕನೇ ಕೆಳಕ್ಕೆ ಬಿದ್ದು ಬಿಟ್ಟೆ. ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ನನ್ನ ಒಂದು ಕಾಲು ತುಂಡಾಗಿದ್ದರೆ, ಇನ್ನೊಂದು ಕಾಲಿಗೆ ಬಹಳಷ್ಟು ಹಾನಿಯಾಗಿತ್ತು.

ನಾನು ಎಂಟನೇ ಕ್ಲಾಸಿನ ತನಕ ಕಲಿತಿದ್ದೆ. ನನ್ನ ಎಲ್ಲಾ ಕುಟುಂಬ ಸದಸ್ಯರಿಗಿಂತಲೂ ನಾನು ಬಹಳಷ್ಟು ಸಂತೋಷದಿಂದಿದ್ದೆ. ಆದರೆ ಒಂದು ಅಪಘಾತ ನನ್ನ ಎಲ್ಲಾ ಸಂತಸವನ್ನೂ ನನ್ನಿಂದ ಕಸಿದುಕೊಂಡು ಬಿಟ್ಟಿತು. ಈಗ ನಾನು ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತೇನೆ. ನಾನು ಹಣಕ್ಕಾಗಿ ಬೇಡಿದಾಗ ಕೆಲವೊಮ್ಮೆ ಜನರು ಕೆಟ್ಟದ್ದಾಗಿ ವರ್ತಿಸುತ್ತಾರೆ. ``ಭಿಕ್ಷೆ ಬೇಡುವ ಸಲುವಾಗಿ ನೀನೇ ನಿನ್ನ ಒಂದು ಕಾಲನ್ನು  ತುಂಡರಿಸಿರುವೆ,'' ಎಂದು ಅವರು ಹೇಳುತ್ತಾರೆ. ಇನ್ನೊಂದು ಕಾಲಿನಿಂದ ಸರಿಯಾಗಿ ನಡೆದಾಡಲೂ ಸಾಧ್ಯವಿಲ್ಲದೇ ಇರುವಾಗ ಒಂದು ಕಾಲನ್ನು ಹಿಡಿದುಕೊಂಡು ನಾನೇನು ಮಾಡಲಿ ? ನಾನು ಮಗುವಾಗಿದ್ದಾಗಲೇ ನನ್ನ ಹೆತ್ತವರನ್ನು ಕಳೆದುಕೊಂಡಿದ್ದೆ.

ನನಗೆ ಭಿಕ್ಷೆ ಬೇಡುವುದು ಇಷ್ಟವಿಲ್ಲ, ಜನರಲ್ಲಿ ಹಣಕ್ಕಾಗಿ ಬೇಡುವುದೂ ಇಷ್ಟವಿಲ್ಲ. ನಾನು ಆತ್ಮಗೌರವದಿಂದ ಬಾಳಲು ಇಚ್ಛಿಸುತ್ತೇನೆ. ಏನಾದರೂ ಕೆಲಸ ಮಾಡಬೇಕೆಂಬ ಹಂಬಲ ನನ್ನದು. ಆದರೆ ನನ್ನ ಒಂದು ಕಾಲು ನೋಡಿ ನನಗೆ ಕೆಲಸ ಕೊಡುವವರ್ಯಾರು ? ಢಾಕಾ ತುಂಬಾ ದುಬಾರಿ ನಗರ.

ನಾನು ಇಲ್ಲಿಗೆ ಎರಡು ವರ್ಷಗಳ ಹಿಂದೆ ಬಂದು ಇಲ್ಲಿ ರಸ್ತೆ ಬದಿಯಲ್ಲಿ ಜೀವಿಸುತ್ತಿದ್ದೇನೆ. ಪ್ಲಾಸ್ಟಿಕ್ ಉಪಯೋಗಿಸಿ ಗುಡಿಸಲು ನಿರ್ಮಿಸಿ ಇತರ ಭಿಕ್ಷುಕರೊಂದಿಗೆ ಜೀವನ ಸಾಗಿಸುತ್ತಿದ್ದೇನೆ. ಈ ಮಳೆಗಾಲ ಪ್ರತಿ ರಾತ್ರಿಯೂ ನಾವು ಮಳೆಗೆ ಒದ್ದೆಯಾಗಿ ಬಿಡುತ್ತೇವೆ. ಈ ಭಾರೀ ಮಳೆ ನನ್ನ ಎಲ್ಲಾ ನೋವುಗಳನ್ನು ಪರಿಹರಿಸಿ ನನಗೆ ಆತ್ಮಗೌರವದ ಬದುಕನ್ನು ನೀಡಬಹುದೆಂದು ನಾನು ಕನಸು ಕಾಣುತ್ತೇನೆ.

- ಬಬ್ಲಿ ಬೇಗಂ (30)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News