ಕಾಣದ ವೈರಿಯೊಡನೆ ಹೇಗೆ ಹೋರಾಡುತ್ತೀರಿ?

Update: 2017-08-21 10:35 GMT

ಅದು ಹೇಗೋ ಗೊತ್ತಿಲ್ಲ. ಕಣ್ಣು ಮಿಟುಕಿಸುವುದರೊಳಗೆ ಮಹಿಳೆಯ ಕೂದಲು ಕತ್ತರಿ ಪ್ರಯೋಗಕ್ಕೊಳಗಾಗುತ್ತದೆ. ಈ ವೇಳೆ ಮಹಿಳೆಗೆ ಹಿಂದಿನಿಂದ ಯಾರೋ ಬಂದಂತೆ ಭಾಸವಾಗುವುದರೊಂದಿಗೆ ಪ್ರಜ್ಞಾಶೂನ್ಯಳಾಗಿರುತ್ತಾಳೆ. ಪ್ರಜ್ಞೆ ಮರುಕಳಿಸಿದಾಗ ಉದ್ದನೆಯ ತಲೆಗೂದಲು ಮಾಯವಾಗಿರುತ್ತದೆ ಮತ್ತು ಅಲ್ಲಿ ಯಾರೂ ಇರುವುದಿಲ್ಲ!

ದಿಲ್ಲಿಯಲ್ಲಿ ಮೊದಲು ಆರಂಭಗೊಂಡಿದ್ದ ಕಾಣದ ಕೈಗಳ ಈ ಹಾವಳಿ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್ ಇತ್ಯಾದಿ ರಾಜ್ಯಗಳಿಗೆ ವ್ಯಾಪಿಸಿ ಈಗ ಮುಂಬೈಗೂ ಕಾಲಿಟ್ಟಿದೆ. ಪೊಲೀಸರೂ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರಾದರೂ ಈ ವಿಲಕ್ಷಣ ಕೃತ್ಯವೆಸಗುತ್ತಿರುವವರು ಯಾರು ಎನ್ನುವುದು ಈವರೆಗೂ ಪತ್ತೆಯಾಗಿಲ್ಲ. ಹೆಚ್ಚಿನವರು ಇದು ಭೂತಷೇಷ್ಟೆ ಎಂದು ಗಾಬರಿಗೊಂಡಿದ್ದಾರೆ.

ಇಲ್ಲಿದೆ ಮೋನಿಕಾ ಕುಮಾರ್ ಕಥೆ. ದಿಲ್ಲಿಯ ಈಕೆ ಕಾಣದ ಕೈಗಳಿಂದ ತನ್ನ ತಲೆಗೂದಲು ಕಳೆದುಕೊಂಡಿರುವ ಮೊದಲ ಮಹಿಳೆಯಾಗಿದ್ದಾಳೆ.

ಆ.1ರಂದು ರಾತ್ರಿ ದಿನದ ಕೆಲಸದಿಂದ ಸುಸ್ತಾಗಿದ್ದ ಮೋನಿಕಾ(23) ಔಟರ್ ದಿಲ್ಲಿಯ ಚಾವ್ಲಾದಲ್ಲಿನ ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಬಿದ್ದುಕೊಂಡಾಗ ಮನೆಗೆಲಸಗಳನ್ನು ಮಾಡಲು ಬೆಳಿಗ್ಗೆ ಬೇಗನೇ ಏಳಬೇಕು ಎನ್ನುವುದೊಂದೇ ಅವಳ ತಲೆಯಲ್ಲಿತ್ತು.

‘‘ನಾವು ಅಂದು ರಾತ್ರಿ ಕೊಂಚ ಬೇಗನೆ ಮಲಗಿದ್ದೆವು. ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ನಿದ್ರೆಯ ಮಧ್ಯೆ ಎಚ್ಚೆತ್ತ ಆಕೆ ಕೋಣೆಯಲ್ಲಿ ಯಾರೋ ಇರುವಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಳು. ಅಂತಹುದೇನೂ ಇಲ್ಲ ಮತ್ತು ಹಾಯಾಗಿ ನಿದ್ರೆ ಮಾಡು ಎಂದು ನಾನು ಆಕೆಗೆ ಸಮಾಧಾನ ಮಾಡಿದ್ದೆ’’ ಎಂದು ಮೋನಿಕಾಳ ಪತಿ ಪ್ರಮೋದ ಕುಮಾರ್ ಹೇಳಿದರು.

ಆದರೆ ತಳಮಳದಲ್ಲಿದ್ದ ಮೋನಿಕಾ ಬಾತ್‌ರೂಮ್‌ಗೆ ಹೋಗಲೆಂದು ಎದ್ದಾಗಲೇ ಅವಳ ತಲೆಗೂದಲು ಕತ್ತರಿಸಲ್ಪಟ್ಟಿದ್ದು ದಂಪತಿಗೆ ಗೊತ್ತಾಗಿತ್ತು. ಕತ್ತರಿಸಲ್ಪಟ್ಟ ಕೂದಲು ಹಾಸಿಗೆಯ ಸುತ್ತ ನೆಲದಲ್ಲಿಯೇ ಬಿದ್ದುಕೊಂಡಿತ್ತು.

ಇದಾದ ಬಳಿಕ ಔಟರ್ ದಿಲ್ಲಿಯ ಇತರ ಹಲವಾರು ಪ್ರದೇಶಗಳಿಂದ ಇಂತಹುದೇ ವಿಚಿತ್ರ ಘಟನೆಗಳು ವರದಿಯಾಗಿದ್ದವು.

ದಿಲ್ಲಿಯ ಹಲವಾರು ಜನರು ‘ಮಂಕಿ ಮ್ಯಾನ್’ ಅನ್ನು ಕಂಡಿದ್ದ ದಿನಗಳನ್ನು ನೆನಪಿಸಿದ್ದ ಈ ಘಟನೆಗಳ ಬಗ್ಗೆ ಜನರು ತಮ್ಮದೇ ಆದ ಕಥೆಗಳನ್ನು ಕಟ್ಟತೊಡಗಿದ್ದರು.

ದಿಲ್ಲಿಯ ದ್ವಾರಕಾಗೆ ಹೊಂದಿಕೊಂಡಿರುವ ಚಾವ್ಲಾ ಈಗಲೂ ಹಳ್ಳಿಯ ವಾತಾವರಣ ವನ್ನು ಹೊಂದಿದೆ. ರಸ್ತೆ ಬದಿ ಅಲ್ಲಲ್ಲಿ ಅಂಗಡಿಕಟ್ಟೆಗಳ ಮುಂದೆ ಕುಳಿತಿರುವ ಜನರ ಗುಂಪುಗಳು ನೀರಿನ ಪೂರೈಕೆಯಿಂದ ಹಿಡಿದು ಸ್ಥಳೀಯ ಹಗರಣಗಳ ಬಗ್ಗೆ ಮಾತನಾಡು ತ್ತಿರುವ ದೃಶ್ಯಗಳು ಇಲ್ಲಿ ಸರ್ವೇಸಾಮಾನ್ಯವಾಗಿವೆ.

ಮೋನಿಕಾಳ ತಲೆಗೂದಲು ಕತ್ತರಿಸಲ್ಪಟ್ಟಿದ್ದು ಇಲ್ಲೀಗ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. ಕೆಲವರು ಈ ಘಟನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರೆ ಇನ್ನು ಕೆಲವರ ಮುಖಗಳಲ್ಲಿ ಅಚ್ಚರಿ ಕಾಣುತ್ತದೆ. ಇನ್ನು ಕೆಲವರು ಇದು ಭೂತಚೇಷ್ಟೆ ಇರಬಹುದು ಎನ್ನುತ್ತಾರೆ.

ಇವೆಲ್ಲ ಸುಳ್ಳು. ವಿಶೇಷವೆಂದರೆ ಈ ಎಲ್ಲ ಘಟನೆಗಳು ಕೆಳಜಾತಿಗಳಿಗೆ ಸೇರಿದ ಮನೆಗಳಿಂದಲೇ ವರದಿಯಾಗಿವೆ ಎಂದು ಚಾವ್ಲಾದ ಹಿರಿಯ ನಿವಾಸಿಯೋರ್ವರು ಹೇಳಿದರು. ಆರಂಭದಲ್ಲಿ ಇದೊಂದು ತಮಾಷೆಯ ಕೃತ್ಯವಾಗಿತ್ತು, ಆದರೆ ಅದು ವಿಪರೀತಕ್ಕಿಟ್ಟುಕೊಂಡಿತ್ತು. ಇದಕ್ಕೆ ಮಾಧ್ಯಮಗಳಲ್ಲಿ ಸಿಕ್ಕ ಪ್ರಚಾರವನ್ನು ಕಂಡ ಇನ್ನಷ್ಟು ಮಹಿಳೆಯರೂ ತಮ್ಮ ತಲೆಗೂದಲೂ ಕತ್ತರಿಸಲ್ಪಟ್ಟಿದೆ ಎಂದು ಹೇಳಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಈ ವ್ಯಕ್ತಿ ಗಟ್ಟಿಯಾಗಿ ನಂಬಿದ್ದಾರೆ.

ಇಲ್ಲಿ ನಿವೃತ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ತಡರಾತ್ರಿಯವರೆಗೂ ನಾವೆಲ್ಲ ಅಂಗಳದಲ್ಲಿ ಕುಳಿತು ಹರಟುತ್ತಲೇ ಇರುತ್ತೇವೆ. ಅಂತಹ ಶಂಕಾಸ್ಪದ ಚಟುವಟಿಕೆಗಳು ನಡೆದಿದ್ದರೆ ನಮ್ಮ ಗಮನಕ್ಕೆ ಬಾರದೇ ಇರುತ್ತಿತ್ತೇ ಎಂಂದು ಅವರು ಪ್ರಶ್ನಿಸಿದರು.

ಸುದ್ದಿಗಾರರ ತಂಡ ಮೋನಿಕಾಳ ಮನೆಗೆ ತೆರಳಿದಾಗ ಆಕೆ ಶೂನ್ಯನೋಟದಿಂದ ಎದುರಿಗಿದ್ದ ಟಿವಿಯನ್ನೇ ವೀಕ್ಷಿಸುತ್ತಿದ್ದಳು. ಎಲ್ಲ ಪ್ರಶ್ನೆಗಳಿಗೆ ವೌನವೇ ಆಕೆಯ ಉತ್ತರವಾಗಿತ್ತು. ಆಕೆಗೆ ಗಂಟಲು ನೋವು, ಹೀಗಾಗಿ ಮಾತನಾಡುತ್ತಿಲ್ಲ ಎಂದು ಗಂಡ ವಿವರಣೆ ನೀಡಿದ್ದ. ಇಷ್ಟಾಗುವಾಗ ಇನ್ನಷ್ಟು ಮಹಿಳೆಯರು ಅಲ್ಲಿ ನೆರೆದಿದ್ದರು. ‘‘ಬಾಗಿಲು ಒಳಗಿನಿಂದ ಭದ್ರ ಪಡಿಸಿದ್ದರೂ ಈ ಘಟನೆ ನಡೆಯುತ್ತಿದೆ. ನಿಲ್ಲಿಸುವುದು ಹೇಗೆ ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ ಇಂತಹ ಭಯಾನಕ ಅನುಭವಕ್ಕೊಳಗಾಗುವ ಬದಲು ನನ್ನ ತಲೆಗೂದಲನ್ನು ನಾನೇ ಕತ್ತರಿಸಿಕೊಂಡರೆ ಹೇಗೆ ಎಂದು ಯೋಚಿಸುತ್ತಿದ್ದೇನೆ’’ ಎಂದು ಓರ್ವ ಮಹಿಳೆ ಹೇಳಿದಳು.

ನೆರೆಕರೆಯ ಮತ್ತು ಸುತ್ತಲಿನ ಗ್ರಾಮಗಳ ಮಹಿಳೆಯರು ಈ ‘ಭೂತಚೇಷ್ಟೆ’ಯಿಂದ ಪಾರಾಗಲು ಮೂಢನಂಬಿಕೆಗಳ ಮೊರೆಹೋಗಿದ್ದಾರೆ. ದೇವಸ್ಥಾನಗಳು ಮತ್ತು ಜ್ಯೋತಿಷಿಗಳ ಬಳಿಗೆ ಎಡತಾಕುತ್ತಿದ್ದಾರೆ. ಕೆಲವರು ತಮ್ಮ ಮನೆಬಾಗಿಲುಗಳ ಮೇಲೆ ಸೆಗಣಿಯಿಂದ ಕೈಗುರುತುಗಳನ್ನು ಮೂಡಿಸಿದ್ದರೆ, ಇನ್ನುಳಿದವರು ಲಿಂಬೆ-ಮೆಣಸುಗಳನ್ನು ತೂಗು ಹಾಕಿದ್ದಾರೆ.

ಇದು ಮನೆಯೊಳಗಿನ ಕಲಹದ ಪರಿಣಾಮ ಅಥವಾ ಮಾನಸಿಕ ಸಮಸ್ಯೆಯಾಗಿ ರುವಂತಿದೆ ಎನ್ನುತ್ತಾರೆ ಪೊಲೀಸರು. ಸತ್ಯವನ್ನು ತಿಳಿದುಕೊಳ್ಳಲು ಕೂದಲು ಕಳೆದುಕೊಂಡ ಮಹಿಳೆಯರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಘಟನೆಯನ್ನು ಮೊದಲು ವರದಿ ಮಾಡಿದ್ದು ನಾವೇ ಎನ್ನುವುದು ಗೊತ್ತಿದೆ. ಆದರೆ ಕಣ್ಣಿಗೆ ಕಾಣದ ವೈರಿಯೊಂದಿಗೆ ಕಾದಾಡುವುದು ಹೇಗೆ? ಪೊಲೀಸರು ಯಾರನ್ನಾದರೂ ಬಂಧಿಸಿದರೆ ಆತ ಮನೆಯೊಳಗೆ ಬಂದಿದ್ದು ಹೇಗೆ ಎನ್ನುವುದನ್ನು ಮೊದಲು ತಿಳಿಯಲು ಬಯಸಿದ್ದೇನೆ ಎಂದು ಪ್ರಮೋದ ಕುಮಾರ್ ಹೇಳಿದಾಗ ಮೋನಿಕಾ ಕೂಡ ತಲೆದೂಗಿದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News