ಕುವೈತ್: ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2017-08-21 11:51 GMT

ಕುವೈತ್, ಆ. 21: ಭಾರತದ  ಸ್ವಾತಂತ್ರ್ಯೋತ್ಸವವನ್ನು ಇಲ್ಲಿನ  ಜಾಬ್ರಿಯಾ ಬಿ.ಬಿ.ಎಸ್. ಅಲುಮ್ನಿ ಕ್ಲಬ್ ನಲ್ಲಿ  ಆಚರಿಸಿತು. ಐಕ್ಯತಾ ಗಾನ 'ಸಾರೆ ಜಹಾಂಸೆ ಅಚ್ಚಾ...'  ಹಾಡಿನ ತಾಳಕ್ಕೆ ಪುಟಾಣಿ ಮಕ್ಕಳು ತ್ರಿವರ್ಣ ಧ್ವಜಗಳನ್ನು ಸುಂದರವಾಗಿ ಬೀಸುವುದರೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು.

ಇಸ್ಲಾಂ ಪ್ರಸೆಂಟೇಶನ್ ಕಮಿಟಿ ಪ್ರಕಟಿಸುತ್ತಿರುವ ಅಲ್ ಮಿಸ್ಬಾಹ್ ಉರ್ದು ಮ್ಯಾಗಝೀನ್ ಸಂಪಾದಕ ಸಫಾತ್ ಆಲಂ ತೈಮಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದರು. ತಾಯ್ನಾಡಿನಿಂದ ದೂರವಿದ್ದರೂ ಸ್ವಾತಂತ್ರ್ಯೋತ್ಸವದ ಕಂಪನ್ನು ಮೆರೆಯಲು ದೊಡ್ಡ ಸಂಖ್ಯೆಯಲ್ಲಿ ಅನಿವಾಸಿಗಳನ್ನು ಒಟ್ಟುಗೂಡಿಸಿದ್ದಕ್ಕಾಗಿ ಸಂಘಟಕರನ್ನು ಅವರು ಅಭಿನಂದಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಉಪಾಧ್ಯಕ್ಷ  ಅಲ್ಲಾವುದ್ದಿನ್ ಹಕ್ ಬಿಹಾರ್, ಭಾರತೀಯರ ಆಂತರಿಕ ಕಚ್ಚಾಟವು ಯಾವ ರೀತಿ ಭಾರತೀಯರನ್ನು ಯೂರೋಪಿಯನ್ನರ ಗುಲಾಮತ್ವದ ಕಡೆಗೆ ನೂಕಿತು ಎನ್ನುವುದನ್ನು ವಿವರಿಸಿದರು. ಪ್ರಸಕ್ತ ನಮ್ಮನ್ನಾಳುತ್ತಿರುವ ಸರ್ವಾಧಿಕಾರಿ ಧೋರಣೆಯುಳ್ಳ ಸರ್ಕಾರಗಳು ಮತ್ತು ಬಂಡವಾಳಶಾಹಿ ಯೂರೋಪಿಯನ್ ಕೊಲೋನಿಯಲ್ ಶಕ್ತಿಗಳ ನಡುವಿನ ಸಾಮ್ಯತೆಗಳ ಬಗ್ಗೆ ಅವರು ವಿವರಿಸಿದರು. ಸ್ವಾತಂತ್ರ್ಯ ಹೋರಾಟದ ಧೀರ್ಘ ಪಯಣದಲ್ಲಿ ಲಕ್ಷಾಂತರ ಹುತಾತ್ಮತೆಯನ್ನು ಪಡೆದ ಸಮುದಾಯವು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟದಿಂದ ದೂರ ನಿಂತ ದೇಶದ್ರೋಹಿಗಳ ಮುಂದೆ ತನ್ನ ದೇಶಪ್ರೇಮವನ್ನು ಸಾಬೀತುಪಡಿಸಬೇಕಾಗಿರುವುದು ಐತಿಹಾಸಿಕ ದುರಂತ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಖಲೀಲ್ ಅಡೂರ್, ಸ್ವಾತಂತ್ರ್ಯವೆಂಬುದು ಪ್ರತಿಯೊಂದು ಜೀವಿಯ ಜನ್ಮ ಸಿದ್ದ ಹಕ್ಕು. ಭಾರತದ ಅಥವಾ ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟದ ಉದ್ದೇಶವು ಕೇವಲ ಆಡಳಿತ ಗಾರರನ್ನು ಬದಲಾವಣೆಗೊಳಿಸುವುದಕ್ಕಲ್ಲ ಬದಲಾಗಿ ತಾನಿಚ್ಚಿಸಿದ್ದನ್ನು ಮಾತನಾಡುವ, ತಾನಿಚ್ಚಿಸಿದಂತೆ ಬದುಕುವ, ತಾನಿಚ್ಚಿಸಿದ್ದನ್ನು ತಿನ್ನುವ ಮೂಲಭೂತ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿಯೇ ಆಗಿದೆ. ಆದರೆ ಇಂದಿನ ದಮನಕಾರಿ ಸರಕಾರಗಳು ಜನರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿರುವುದು ಆತಂಕಕಾರಿ ಎಂದರು.

ಐಎಸ್ಎಫ್ ಕರ್ನಾಟಕ ಅಧ್ಯಕ್ಷ ಇಮ್ತಿಯಾಝ್ ಅಹ್ಮದ್ ಅರ್ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಡಿಯನ್ ಸೋಶಿಯಲ್ ಫೋರಮ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಮಂಚಿ  ಸ್ವಾಗತಿಸಿದರು. ಶಮೀರ್ ಅಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಿಕಂದರ್ ಭಾಷಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News