ಭಾರತೀಯ ನರ್ಸಿಂಗ್ ಮಂಡಳಿಗೆ ನರ್ಸಿಂಗ್ ಕಾಲೇಜುಗಳ ಪಟ್ಟಿ ಪ್ರಕಟಿಸುವ ಅಧಿಕಾರ: ಹೈಕೋರ್ಟ್
ಬೆಂಗಳೂರು, ಆ.21: ಭಾರತೀಯ ನರ್ಸಿಂಗ್ ಮಂಡಳಿಗೆ ಮಾತ್ರ ಮಾನ್ಯತೆ ಪಡೆದ ನರ್ಸಿಂಗ್ ಕಾಲೇಜುಗಳ ಪಟ್ಟಿಯನ್ನು ಪ್ರಕಟಿಸುವ ಅಧಿಕಾರ ಇದೆ ಎಂದು ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ನರ್ಸಿಂಗ್ ಕಾಲೇಜುಗಳಿಗೆ ಮಾನ್ಯತೆ ನೀಡುವ ಅಧಿಕಾರವನ್ನು ಭಾರತೀಯ ನರ್ಸಿಂಗ್ ಮಂಡಳಿ ಹೊಂದಿಲ್ಲ. ಹೀಗಾಗಿ, ಮಾನ್ಯತೆ ಪಡೆದ ಕಾಲೇಜುಗಳ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತಿಲ್ಲ ಎಂದು ತಿಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಇತ್ತೀಚೆಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆದಿಚುಂಚನಗಿರಿ ನರ್ಸಿಂಗ್ ಕಾಲೇಜು ಸೇರಿದಂತೆ 29 ಕಾಲೇಜುಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.
ಸೋಮವಾರ ಈ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಭಾರತೀಯ ನರ್ಸಿಂಗ್ ಮಂಡಳಿಗೆ ಮಾತ್ರ ಮಾನ್ಯತೆ ಪಡೆದ ನರ್ಸಿಂಗ್ ಕಾಲೇಜುಗಳ ಪಟ್ಟಿಯನ್ನು ಪ್ರಕಟಿಸುವ ಅಧಿಕಾರ ಹೊಂದಿದೆ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಭಾರತೀಯ ನರ್ಸಿಂಗ್ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಮಾನ್ಯತೆ ಪಡೆದ ಕಾಲೇಜುಗಳ ಪಟ್ಟಿ ಪ್ರಕಟಿಸದಂತೆ ಏಕಸದಸ್ಯ ಪೀಠವು ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿತು. ಹಾಗೆಯೇ, ಮಾನ್ಯತೆ ಪಡೆದ ಕಾಲೇಜುಗಳ ಪಟ್ಟಿಯನ್ನು ಮಂಡಳಿಯು ವೆಬ್‌ಸೈಟ್‌ನಲ್ಲಿ ಪ್ರಕಟಿಸಬಹುದು ಎಂದು ಅನುಮತಿ ನೀಡಿ ಮಧ್ಯಂತರ ಆದೇಶ ಮಾಡಿತು.