ಎಸ್‌ಐಟಿ ಮುಂದೆ ಹಾಜರಾದ ಮಾಜಿ ಸಿಎಂ ಎಚ್‌ಡಿಕೆ
ಬೆಂಗಳೂರು, ಆ.21: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ವಿಶೇಷ ತನಿಖಾ ದಳದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಜಾಮೀನು ನೀಡುವಾಗ ಪ್ರತಿ 15 ದಿನಗಳಿಗೊಮ್ಮೆ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಷರತ್ತು ವಿಧಿಸಲಾಗಿತ್ತು. ಅನಾರೋಗ್ಯ ಹಾಗೂ ಬಿಡುವಿಲ್ಲದ ಕಾರಣ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇಂದು ಅಧಿಕಾರಿಗಳ ಎದುರು ಹಾಜರಾಗಿ ವಿವರಣೆ ನೀಡಿದ್ದೇನೆ ಎಂದು ತಿಳಿಸಿದರು.
ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ತನ್ನ ವಿರುದ್ಧ ಹಾಕಲಾಗಿರುವ ಕೇಸ್‌ನಲ್ಲಿ ಯಾವುದೇ ಹುರುಳಿಲ್ಲ. 2007ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಈಗ 10 ವರ್ಷಗಳ ಬಳಿಕ ಇದಕ್ಕೆ ಜೀವ ಬಂದಿದೆ. ಇದನ್ನು ಚುನಾವಣಾ ಸಂದರ್ಭದವರೆಗೆ ಜೀವಂತ ಇರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಎಳೆಯಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಮಂಗಳವಾರ ಸುದೀರ್ಘ ವಿವರಣೆ ನೀಡುತ್ತೇನೆ. ಎರಡು ರಾಜಕೀಯ ಪಕ್ಷಗಳು ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿವೆ ಎಂಬುದನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಪ್ರತಿ ದಿನ ನಾಲ್ಕರಿಂದ ಐದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಲ್ಲೂ ಚರ್ಚೆಗಳು ನಡೆಯುತ್ತಿಲ್ಲ. ಕೇವಲ ಡೋಂಗಿ ರಾಜಕಾರಣದ ಬಗ್ಗೆ ನಾಯಕರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಡೋಂಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಟೀಕಿಸಿದರು.
ಕುಮಾರಸ್ವಾಮಿ ತಪ್ಪುಮಾಡಿದ್ದಾರೆ ಎಂಬ ಭಾವನೆಯನ್ನು ಯಾರೂ ಹೊಂದಬಾರದು. ಈ ಪ್ರಕರಣದಲ್ಲಿ ನಾನು ಕಾನೂನು ಮೀರಿ ನಡೆದುಕೊಂಡಿಲ್ಲ. ಒಂದು ವೇಳೆ ಎಲ್ಲಿಯಾದರೂ ಎಡವಿದ್ದರೆ ಕಾನೂನಿಗೆ ತಲೆ ಬಾಗುತ್ತೇನೆ ಎಂದು ಹೇಳಿದ ಅವರು, ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ನನ್ನ ವಿರುದ್ಧ ಸುಳ್ಳು ಕೇಸು ಹಾಕಿ, ಸುಳ್ಳು ದಾಖಲೆ ಸೃಷ್ಟಿಸಿ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.