ಬಿಜೆಪಿ ವಿರುದ್ಧ ಡಿಕೆಶಿ ಅಭಿಮಾನಿಗಳ ಪ್ರತಿಭಟನೆ
ಬೆಂಗಳೂರು, ಆ.21: ಭ್ರಷ್ಟ ನಾಯಕರಿಂದಲೇ ತುಂಬಿರುವ ರಾಜ್ಯ ಬಿಜೆಪಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಖಂಡಿಸಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ವೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನ ನಡೆಸಿ, ಇಂದನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಬೇಕೆನ್ನುವ ದುರುದ್ದೇಶದಿಂದ ರಾಜಕೀಯ ಪ್ರೇರಿತ ಐಟಿ ದಾಳಿ ಮಾಡಿಸಿದ ಬಿಜೆಪಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಸಂಘಟನೆ ಸದಸ್ಯರು ಕಿಡಿಕಾರಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್.ಅಂಗಡಿ, ಭೂ ಹಗರಣ, ಭ್ರಷ್ಟಾಚಾರ ಮುಂತಾದ ಹಗರಣಗಳಲ್ಲಿ ಭಾಗಿಯಾಗಿರುವ ಮತ್ತು ಜೈಲಿಗೆ ಹೋಗಿ ಬಂದಿರುವ ನಾಯಕರೇ ತುಂಬಿರುವ ಬಿಜೆಪಿಗೆ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅನೇಕ ಹಗರಣಗಳು ನಡೆದಿರುವುದಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಜೈಲು ಸೇರಿದ್ದರು. ಆದರೆ,ಇದೀಗ ಡಿ.ಕೆ.ಶಿವಕುಮಾರ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ನುಡಿದರು. ಪ್ರತಿಭಟನೆಯಲ್ಲಿ ನೂರಾರು ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.