ಲಾಲ್‌ಚಂದ್ ರಾಜ್‌ಪೂತ್‌ರನ್ನು ಕೋಚ್ ಆಗಿ ಮುಂದುವರಿಸದಿರಲು ಅಫ್ಘಾನಿಸ್ತಾನ ನಿರ್ಧಾರ

Update: 2017-08-21 18:39 GMT

ಮುಂಬೈ, ಆ.21: ಕೆಲವೇ ತಿಂಗಳ ಹಿಂದೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಟೆಸ್ಟ್ ಸ್ಥಾನಮಾನ ಪಡೆಯಲು ಮಾರ್ಗದರ್ಶನ ನೀಡಿದ್ದ ಲಾಲ್‌ಚಂದ್ ರಾಜ್‌ಪೂತ್‌ರನ್ನು ಸೀನಿಯರ್ ತಂಡದ ಕೋಚ್ ಆಗಿ ಮುಂದುವರಿಸದೇ ಇರಲು ಅಫ್ಘಾನಿಸ್ತಾನ ನಿರ್ಧರಿಸಿದೆ. 55ರ ಪ್ರಾಯದ ರಾಜ್‌ಪೂತ್ ಕಾಬೂಲ್‌ಗೆ ತೆರಳಿ ಅಫ್ಘಾನಿಸ್ತಾನ ತಂಡದೊಂದಿಗೆ ಕಾರ್ಯನಿರ್ವಹಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್‌ಪೂತ್‌ರ ಒಪ್ಪಂದದ ಅವಧಿ ಈ ವರ್ಷದ ಆಗಸ್ಟ್‌ನಲ್ಲಿ ಕೊನೆಗೊಳ್ಳಲಿದ್ದು ಅವರ ಒಪ್ಪಂದ ಮುಂದುವರಿಸದಿರಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ) ನಿರ್ಧರಿಸಿದೆ. ತೃಪ್ತಿಕರ ನಿರ್ವಹಣೆ ತೋರಿರುವ ರಾಜ್‌ಪೂತ್‌ಗೆ ನಾವು ಕೃತಜ್ಞತೆ ಸಲ್ಲಿಸುವೆವು. ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನೇಮಕ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ ಎಂದು ಎಸಿಬಿ ಪ್ರಕಟನೆಯಲ್ಲಿ ತಿಳಿಸಿದೆ. ‘‘ಎಸಿಬಿ ತಾನು ಕಾಬೂಲ್‌ಗೆ ಪ್ರಯಾಣಿಸಬೇಕೆಂದು ತಿಳಿಸಿತು. ತಾನು ಅಲ್ಲಿಗೆ ಪ್ರಯಾಣಿಸಲಾರೆ ಎಂದು ತಿಳಿಸಿದ್ದೇನೆ’’ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ರಾಜ್‌ಪೂತ್ ಹೇಳಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಭಾರತದ ಕೋಚ್ ಹುದ್ದೆ ವಂಚಿತರಾದ ಬಳಿಕ ರಾಜ್‌ಪೂತ್ ಅಫ್ಘಾನಿಸ್ತಾನದ ಕೋಚ್ ಆಗಿ ನೇಮಕಗೊಂಡಿದ್ದರು. ಪಾಕಿಸ್ತಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್‌ರಿಂದ ತೆರವಾದ ಸ್ಥಾನಕ್ಕೆ ಒಂದು ವರ್ಷದ ಅವಧಿಗೆ ರಾಜ್‌ಪೂತ್ ಕೋಚ್ ಆಗಿ ಆಯ್ಕೆಯಾಗಿದ್ದರು.

ರಾಜ್‌ಪೂತ್ ಅಫ್ಘಾನಿಸ್ತಾನ ತಂಡದ ಕೋಚ್ ಆಗಿ ಯಶಸ್ವಿಯಾಗಿದ್ದರು. ಅಫ್ಘಾನ್ ತಂಡ ಸ್ಕಾಟ್ಲೆಂಡ್ ವಿರುದ್ಧ 1-0 ಅಂತರದಿಂದ ಜಯ ಸಾಧಿಸಲು ಮಾರ್ಗದರ್ಶನ ನೀಡಿದ್ದ ಅವರು ಐರ್ಲೆಂಡ್ ವಿರುದ್ಧ 2-2 ರಿಂದ ಸಮಬಲ ಸಾಧಿಸಲು ಕೋಚಿಂಗ್ ನೀಡಿದ್ದರು. ಅಫ್ಘಾನ್ ತಂಡ ಬಾಂಗ್ಲಾದೇಶ ವಿರುದ್ಧ ಸರಣಿಯನ್ನು ಸೋತ ಬಳಿಕ ಝಿಂಬಾಬ್ವೆ(ವಿದೇಶ) ಹಾಗೂ ಐರ್ಲೆಂಡ್(ಸ್ವದೇಶ) ವಿರುದ್ಧ ಸರಣಿಯನ್ನು ಗೆದ್ದುಕೊಂಡಿತ್ತು. ರಾಜ್‌ಪೂತ್ ಕೋಚ್ ಆಗಿದ್ದ ಅವಧಿಯಲ್ಲಿ 10 ಸರಣಿಗಳ ಪೈಕಿ ಆರರಲ್ಲಿ ಜಯ ಸಾಧಿಸಿದ್ದ ಅಫ್ಘಾನಿಸ್ತಾನ ಐಸಿಸಿಯಲ್ಲಿ ಪೂರ್ಣ ಸದಸ್ಯತ್ವ ಪಡೆದುಕೊಂಡಿತ್ತು. ಅಫ್ಘಾನ್ ತಂಡ ಇತ್ತೀಚೆಗೆ ವಿಂಡೀಸ್ ತಂಡವನ್ನು ಮಣಿಸಿ ಶಾಕ್ ನೀಡಿದ್ದಲ್ಲದೆ ಎಂಸಿಸಿ ವಿರುದ್ಧ ಲಾರ್ಡ್ಸ್‌ನಲ್ಲಿ ಚೊಚ್ಚಲ ಪಂದ್ಯ ಆಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News