ರಾಜಸ್ಥಾನ ಸರ್ಕಾರದ ಹೊಸ ಚುನಾವಣಾ ಗಿಮಿಕ್ ಏನು ಗೊತ್ತೇ?

Update: 2017-08-22 03:53 GMT

ಜೈಪುರ, ಆ. 22: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಇರುವ ಹಿನ್ನೆಲೆಯಲ್ಲಿ ಚುನಾವಣಾ ಗಿಮಿಕ್‌ಗೆ ರಾಜಸ್ಥಾನ ಮುಂದಾಗಿದ್ದು, ಮುಂದಿನ ಮಂಗಳವಾರ ಹೊಸ ದಾಖಲೆ ನಿರ್ಮಿಸಲು ಹೊರಟಿದೆ.

ಆಗಸ್ಟ್ 29ರಂದು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ 9,500 ರಸ್ತೆ ನಿರ್ಮಾಣ ಯೋಜನೆಗಳಿಗೆ ಚಾಲನೆ ಕೊಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಪಿಎಂಜಿಎಸ್‌ಐ ಯೋಜನೆಯಡಿ ಗ್ರಾಮೀಣ ರಸ್ತೆಗಳು ಸೇರಿದಂತೆ 27 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆಗಳಿಗೆ ಅಂದು ಪ್ರಧಾನಿ ಚಾಲನೆ ನೀಡಲಿದ್ದಾರೆ.

ಉದಯಪುರಕ್ಕೆ ಮುಂದಿನ ವಾರ ಭೇಟಿ ನೀಡಲಿರುವ ಮೋದಿ, ಈ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವರು ಹಾಗೂ ಕೆಲ ಯೋಜನೆಗಳನ್ನು ಉದ್ಘಾಟಿಸುವರು. ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ವಸುಂಧರರಾಜೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಇತರ ಗಣ್ಯರು.

ಹೆದ್ದಾರಿ ಸಚಿವಾಲಯದ ನೆರವಿನಲ್ಲಿ ಕೈಗೆತ್ತಿಕೊಂಡಿರುವ 109 ಯೋಜನೆಗಳಡಿ, 3000 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಹೆದ್ದಾರಿಗಳ ಅಗಲೀಕರಣ, ಸುಧಾರಣೆ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಗಳು ಸೇರಿದೆ. ಇದರ ಜತೆಗೆ ಕಾಮಗಾರಿ ಪೂರ್ಣಗೊಂಡ 11 ರಾಷ್ಟ್ರೀಯ ಹೆದ್ದಾರಿಗಳನ್ನು ಮೋದಿ ಉದ್ಘಾಟಿಸುವರು. ಒಟ್ಟು 873 ಕಿಲೋಮೀಟರ್ ಉದ್ದದ ಹೆದ್ದಾರಿಯಲ್ಲಿ ಕೋಟಾದಲ್ಲಿ ಚಂಬಲ್ ನದಿಗೆ ನಿರ್ಮಿಸಿರುವ ಆರು ಲೇನ್‌ಗಳ ತೂಗುಸೇತುವೆಯೂ ಸೇರಿದೆ.

ಉಳಿದ ಬಹುತೇಕ ಯೋಜನೆಗಳು ಕೇಂದ್ರ ಸರ್ಕಾರದ ಗ್ರಾಮೀಣ ಸಂಪರ್ಕ ಯೋಜನೆಯಡಿ ಸೇರುತ್ತವೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರಾಜಸ್ಥಾನ ರಸ್ತೆ ವಲಯ ಆಧುನೀಕರಣ ಯೋಜನೆ, ಗ್ರಾಮೀಣ ಗೌರವಪಥ ಯೋಜನೆಯಡಿ ಈ ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News