ಮುಸ್ಲಿಮರು ಮತ ನೀಡದೇ ಇದ್ದರೂ ಗೆಲ್ಲುವ ವಿಶ್ವಾಸವಿದೆ: ಕಾಂಗ್ರೆಸ್ ಉಚ್ಛಾಟಿತ ಶಾಸಕ ರೌಲ್ಜಿ

Update: 2017-08-22 07:45 GMT

ವಡೋದರ, ಆ. 22:  ರಾಜ್ಯಸಭಾ ಚುನಾವಣೆಯಲ್ಲಿ  ಅಡ್ಡ ಮತದಾನ ಮಾಡಿದ ಆರೋಪದ ಮೇಲೆ  ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲ್ಪಟ್ಟು ಬಿಜೆಪಿ ಸೇರಲು ಸನ್ನದ್ಧರಾಗಿರುವ ಗೋಧ್ರಾ ಶಾಸಕ  ಸಿ ಕೆ ರೌಲ್ಜಿ ತಾವು ಕೇಸರಿ ಪಕ್ಷ ಸೇರುವುದರಿಂದ ವಿಧಾನಸಭಾ ಚುನಾವಣೆಯಲ್ಲಿನ ತಮ್ಮ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂದು  ಹೇಳಿದ್ದಾರೆ.

'ನಾನು ಮುಂಚೆ ಜೆಡಿಯುವಿನಲ್ಲಿದ್ದೆ. ಹಿಂದೆ ಕೂಡ ಚುನಾವಣೆಗಳನ್ನು ಗೆದ್ದಿದ್ದೇನೆ. ಇಡೀ ಜಿಲ್ಲೆಯಲ್ಲಿ ಶ್ರಮ ವಹಿಸಿ ದುಡಿದಿದ್ದೇನೆ ಹಾಗೂ ಸಮುದಾಯ ಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅಲ್ಪಸಂಖ್ಯಾತರ ಮತಗಳು ನನಗೆ ದೊರೆಯದೇ ಇದ್ದರೂ ಅದು ನನ್ನ ಗೆಲ್ಲುವ ಅವಕಾಶವನ್ನು ಕಡಿಮೆ ಮಾಡದು' ಎಂದು ಮುಸ್ಲಿಂ ಬಾಹುಳ್ಯದ ಗೋಧ್ರಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ರೌಲ್ಜಿ ಹೇಳಿದರು.

ಬಿಜೆಪಿಯಿಂದ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಪಕ್ಷದ ನಾಯಕತ್ವದ ಜತೆ ತಾನು ಮಾತುಕತೆ ನಡೆಸಿಲ್ಲ ಎಂದು ಹೇಳಿದರು. 'ಸದ್ಯ ನಾನು ಪಕ್ಷದ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ. ಪಕ್ಷ ಮುಂದೇನು ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡೋಣ' ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಮಾತನಾಡುತ್ತಾ ಮುಸ್ಲಿಮರು ಬಿಜೆಪಿಗೆ ಮತ ಚಲಾಯಿಸುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಆದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಳಂಕಿ ಮಾತನಾಡುತ್ತ ರೌಲ್ಜಿ ವಿರುದ್ಧ ಸ್ಪರ್ಧಿಸುವ ಯಾರೇ ಆದರೂ ಗೋಧ್ರಾದಲ್ಲಿ ಗೆಲ್ಲುತ್ತಾರೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News