ಕೇರಳದ ಈ ವಿಶಿಷ್ಟ ಶಾಲೆಗೆ ಪ್ರಮಾಣಪತ್ರಗಳಲ್ಲಿ ವಿಶ್ವಾಸವಿಲ್ಲ!

Update: 2017-08-22 09:18 GMT

ಸರಕಾರಿ ಶಾಲಾ ಶಿಕ್ಷಕರಾಗಿದ್ದ ಗೋಪಾಲಕೃಷ್ಣನ್ ಮತ್ತು ವಿಜಯಲಕ್ಷ್ಮೀ ದಂಪತಿ 1994ರಲ್ಲಿ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡಿದಾಗ ವಿಶಿಷ್ಟ ಶಾಲೆಯೊಂದನ್ನು ಸ್ಥಾಪಿಸುವುದು ಅವರ ಕನಸಾಗಿತ್ತು. ಅವರ ಕನಸಿನ ಶಾಲೆ ‘ಸಾರಂಗ’ದ ಕಲ್ಪನೆ ವಿಭಿನ್ನವಾಗಿತ್ತು. ಅದು ಇತರ ಸಾಂಪ್ರದಾಯಿಕ ಶಾಲೆಗಳಂತಿರಬಾರದು,ಅಲ್ಲಿ ಪ್ರಮಾಣ ಪತ್ರಗಳು, ಪಠ್ಯಕ್ರಮ ಮತ್ತು ಪದವಿಗಳ ಗೋಜಲು ಇರಬಾರದು ಎನ್ನುವುದು ಅವರ ಚಿಂತನೆಯಾಗಿತ್ತು.

           (ಗೋಪಾಲಕೃಷ್ಣನ್ ದಂಪತಿ)

ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಅಗಳಿ ಪಂಚಾಯತ್ ವ್ಯಾಪ್ತಿಯಲ್ಲಿ ಅವರು ಶಾಲೆ ಆರಂಭಿಸಿದಾಗ ಪ್ರಥಮ ವಿದ್ಯಾರ್ಥಿಯಾಗಿ ಮಗ ಗೌತಮನನ್ನೇ ಸೇರಿಸಿಕೊಂಡಿ ದ್ದರು. ನಿಧಾನವಾಗಿ ಶಾಲೆಯ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತವಾಗತೊಡಗಿದ್ದು, ಆಸುಪಾಸಿನ ಮನೆಗಳ ಮತ್ತು ಗೋಪಾಲಕೃಷ್ಣನ್ ದಂಪತಿಗೆ ನಿಕಟವಾಗಿದ್ದ ಕುಟುಂಬಗಳ ಮಕ್ಕಳೂ ಸೇರಿಕೊಂಡಿದ್ದರು.

ತಮ್ಮ ಉಳಿತಾಯದ ಹಣದಿಂದ ಗುಡ್ಡದ ಇಳಿಜಾರಿನಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿ ದಂಪತಿ ಸ್ಥಾಪಿಸಿದ್ದ ಶಾಲೆ ಇಂದು 12 ಎಕರೆಗೆ ವಿಸ್ತರಣೆಗೊಂಡಿದೆ. ಆರಂಭದಲ್ಲಿ ಅಲ್ಲಿ ಕೆಲವೇ ಮರಗಳಿದ್ದು, ಇದ್ದ ಏಕೈಕ ನೀರಿನ ಮೂಲ ಸಂಪೂರ್ಣವಾಗಿ ಬತ್ತಿಹೋಗಿತ್ತು. ಸ್ವಂತ ಪರಿಶ್ರಮದಿಂದ ನೀರಿನ ಮೂಲವನ್ನು ಅವರು ಪುನಃಶ್ಚೇತನ ಗೊಳಿಸಿದ್ದು, ಶಾಲೆಯ ವಿದ್ಯಾರ್ಥಿಗಳು, ಹಿತೈಷಿಗಳು ಮತ್ತು ಸ್ನೇಹಿತರ ಸಹಕಾರದಿಂದ ಇಂದು ಶಾಲೆಯ ಪರಿಸರ ಹಸಿರನ್ನು ಮೈದುಂಬಿಕೊಂಡಿದೆ.

ಜಾಗದ ಹೆಚ್ಚಿನ ಭಾಗವನ್ನು ಕಾಡು ಬೆಳೆಸಲು ಮೀಸಲಿಟ್ಟಿದ್ದ ಅವರು ಉಳಿದ ಜಾಗದಲ್ಲಿ ಶಾಲೆ ಮತ್ತು ತಮ್ಮ ವಾಸಕ್ಕೊಂದು ಪುಟ್ಟಮನೆಯನ್ನು ನಿರ್ಮಿಸಿಕೊಂಡಿದ್ದರು.

ಕಾಡ್ಗಿಚ್ಚಿನಿಂದ ತಮ್ಮ ಜಾಗವನ್ನು ರಕ್ಷಿಸಿಕೊಳ್ಳುವುದು ಅವರ ಪಾಲಿಗೆ ದೊಡ್ಡ ಸಮಸ್ಯೆ ಯಾಗಿತ್ತಾದರೂ ನಿಧಾನವಾಗಿ ಅದೂ ಪರಿಹಾರಗೊಂಡತ್ತು. ಇಂದು ಶಾಲೆಗೆ ಅಗತ್ಯವಿರುವ ಎಲ್ಲ ತರಕಾರಿಗಳು ಮತ್ತು ಧಾನ್ಯಗಳನ್ನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಆವರಣದಲ್ಲಿಯೇ ಬೆಳೆಯಲಾಗುತ್ತಿದೆ.

ಜಿಂಕೆ, ಮೊಲ, ಅಳಿಲು,ಮುಳ್ಳುಹಂದಿ ಇತ್ಯಾದಿಗಳು ಇಂದು ಶಾಲೆಯ ಕಾಡಿನಲ್ಲಿ ವಾಸವಾಗಿವೆ.

ಸಾರಂಗ ಇಂದು ವಿಶ್ವಾದ್ಯಂತದ ಮಕ್ಕಳಿಗೆ ಪರ್ಯಾಯ ಶಿಕ್ಷಣದ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಾಂಪ್ರದಾಯಿಕ ಶಾಲೆಗಳಂತೆ ಇಲ್ಲಿ ನಿಯಮಿತ ತರಗತಿಗಳು ನಡೆಯುವುದಿಲ್ಲವಾದ್ದರಿಂದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ದೈಹಿಕವಾಗಿ ಹಾಜರಿರಬೇಕಿಲ್ಲ.

 ಇಲ್ಲಿಯ ವಿದ್ಯಾರ್ಥಿಗಳು ಸುತ್ತಲಿನ ಪರಿಸರವನ್ನು ಅನುಭವಿಸುತ್ತ, ಅದನ್ನು ನೋಡುತ್ತ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಲ,ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ವನ್ನು ಕಲಿಯುತ್ತಿದ್ದಾರೆ.

ಅಂದ ಹಾಗೆ ಶಾಲೆಯನ್ನು ಗೋಪಾಲಕೃಷ್ಣನ್ ದಂಪತಿ ಮಣ್ಣು, ಹುಲ್ಲು ಮತ್ತು ಬಿದಿರುಗಳನ್ನು ಬಳಸಿ ಸ್ವಂತಕೈಗಳಿಂದಲೇ ನಿರ್ಮಿಸಿದ್ದಾರೆ. ಶಾಲೆಯ ಆವರಣದಲ್ಲಿರುವ ಕಟ್ಟಡಗಳ ನಿರ್ಮಾಣದಲ್ಲಿ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸ್ವಯಂಸೇವಕರು ಶ್ರಮದಾನ ಮಾಡಿದ್ದಾರೆ. ಇಲ್ಲಿ ಕಾಂಕ್ರೀಟ್ ಸಾಮಗ್ರಿಗಳನ್ನು ಸೀಮಿತ ಪ್ರಮಾಣದಲ್ಲಿದ್ದು, ನೈಸರ್ಗಿಕ ಪರಿಕರಗಳನ್ನೇ ಹೆಚ್ಚಾಗಿ ಬಳಸಲಾಗಿದೆ.


                     (ಗೌತಮ್ ಕುಟುಂಬ)

ಶಾಲೆ ಮತ್ತು ಇತರ ಕಟ್ಟಡಗಳಿಗೆ ಸಂಪೂರ್ಣವಾಗಿ ಸೌರ ವಿದ್ಯುತ್ತನ್ನೇ ಬಳಸಲಾಗುತ್ತಿದೆ. ವಿಶೇಷವಾಗಿ ನಿರ್ಮಿಸಲಾದ ಕಟ್ಟಿಗೆಯ ಒಲೆಯಲ್ಲಿ ಆಹಾರವನ್ನು ತಯಾರಿಸಲಾಗುತ್ತಿದ್ದು, ಎಲ್ಲ ತ್ಯಾಜ್ಯಗಳನ್ನು ಕಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ.

ಕೃಪೆ : economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News