ಕೃಷಿ ಕಾರ್ಮಿಕರ, ದಲಿತರ ನೆರವಿಗೆ ಬಾರದ ಸರಕಾರಗಳು: ಮಾವಳ್ಳಿ ಶಂಕರ್ ಆಕ್ರೋಶ

Update: 2017-08-22 13:46 GMT

ಬೆಂಗಳೂರು,ಆ.22: ಸಾಲ ಮನ್ನಾ, ಬೆಂಬಲ ಬೆಲೆ, ಜಾನುವಾರು ಮಾರಾಟ ನಿಷೇಧ ನಿಯಮಾವಳಿ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು, ಕೃಷಿ ಕಾರ್ಮಿಕರು, ದಲಿತ ಸಂಘಟನೆಗಳ ಸದಸ್ಯರು ಇಂದು ನಗರದ ಪುರಭವನದ ಮುಂಭಾಗ ಧರಣಿ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ರಾಜ್ಯ ದಲಿತ ಸಂಘಟನೆಗಳ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ರಾಜ್ಯದಲ್ಲಿ ನಿರಂತರವಾಗಿ ಬರಗಾಲವಿದ್ದರೂ ರೈತ ಕೃಷಿ ಕಾರ್ಮಿಕರ, ದಲಿತರ ಸಹಾಯಕ್ಕೆ ಯಾವ ಸರಕಾರಗಳು ನೆರವಿಗೆ ಬಂದಿಲ್ಲ ಎಂದು ಕಿಡಿಕಾರಿದರು.

ಕಾರ್ಪೊರೇಟ್ ಸಂಸ್ಥೆಗಳ ಸಾವಿರಾರು ಕೋಟಿ ರೂ. ಸಾಲಮನ್ನಾ ಮಾಡಲು ಪ್ರಧಾನಿ ಮೋದಿ ತೋರಿಸಿದ ಕಾಳಜಿಯನ್ನು ರೈತರ, ಕಾರ್ಮಿಕರ ಪರ ತೋರಿಸಲಿ ಎಂದು ಸವಾಲು ಹಾಕಿದ ಅವರು, ರೈತ ಕೃಷಿ ಕಾರ್ಮಿಕರ, ದಲಿತರ ಖಾಸಗಿ ಸಾಲವೂ ಸೇರಿ ರಾಷ್ಟ್ರೀಯ ಬ್ಯಾಕುಗಳಲ್ಲಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕ್ರಮ ಕೃಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ ಮಾತನಾಡಿ, ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಶಾಸನ ರೂಪಿಸಬೇಕು. ಬೆಳೆ ವಿಮೆ ಯೋಜನೆಯನ್ನು ರೈತರಿಗೆ ಪ್ರಯೋಜನಾಕಾರಿಯಾಗುವಂತೆ ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಜಾನುವಾರು ಮಾರಾಟ ನಿರ್ಬಂಧ ನಿಯಮಾವಳಿಯನ್ನು ಕೈಬಿಡಬೇಕು. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಹೈನುಗಾರರ ಸಾಲಮನ್ನಾದ ಜೊತೆಗೆ ಪ್ರತಿ ಲೀ. ಹಾಲಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 10 ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ರ್ಯಾಲಿ:  ಧರಣಿ ಬಳಿಕ ಪುರಭವನದಿಂದ ಕೆ.ಜಿ.ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಸಂಘಟನೆಗಳ ಕಾರ್ಯಕರ್ತರು ರ್ಯಾಲಿ ನಡೆಸಿದರು. ಬಳಿಕ ವಿಶೇಷ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘ ನಗರ ಜಿಲ್ಲಾಧ್ಯಕ್ಷ ಪಾಲನೇತ್ರಯ್ಯ, ರೈತ ಕೃಷಿ ಕಾರ್ಮಿಕರ ಸಂಘದ ರಾಜ್ಯ ಸಮಿತಿಯ ಸದಸ್ಯ ಆನಂದ್ ಐಯ್ಯೂರು ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News