ಬಿಎಸ್‌ವೈ ವಿರುದ್ಧದ ಡಿ-ನೋಟಿಫಿಕೇಷನ್ ಆರೋಪ: ಎಸಿಬಿಗೆ ಹೈಕೋರ್ಟ್ ನೋಟಿಸ್

Update: 2017-08-22 15:24 GMT

 ಬೆಂಗಳೂರು, ಆ.22: ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಲ್ಲಿ ಡಿ-ನೋಟಿಫಿಕೇಷನ್ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳ ರದ್ದು ಕೋರಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಗಳ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿ ವಿಚಾರಣೆ ವೇಳೆ ಯಡಿಯೂರಪ್ಪ ಪರ ವಾದಿಸಿದ ವಕೀಲರು, ರಾಜಕೀಯ ಪ್ರೇರಿತವಾಗಿ ಅರ್ಜಿದಾರರ ವಿರುದ್ಧ ಎಸಿಬಿ ದೂರು ದಾಖಲಿಸಿದೆ. ಹೀಗಾಗಿ, ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಎಸಿಬಿ ಪರ ವಾದಿಸಿದ ವಕೀಲರು, ನಮಗೆ ಇನ್ನು ಅರ್ಜಿಯ ಪ್ರತಿ ಸಿಕ್ಕಿಲ್ಲ. ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು. ಇದಕ್ಕೆ ಒಪ್ಪಿದ ಪೀಠ, ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡುವ ಕುರಿತ ಮನವಿಯ ಬಗ್ಗೆ ಬುಧವಾರ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿತು.

ಪ್ರಕರಣವೇನು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧೆಡೆ ವಶಪಡಿಸಿಕೊಂಡಿದ್ದ ಒಟ್ಟು 3,546.12 ಎಕರೆ ಜಮೀನಿನಲ್ಲಿ 257 ಎಕರೆ 20 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿೈ ಮಾಡಿದ್ದಾರೆ ಎಂದು ಆರೋಪಿಸಿ ಡಾ.ಡಿ.ಅಯ್ಯಪ್ಪ ಎಸಿಬಿಗೆ ಖಾಸಗಿ ದೂರು ನೀಡಿದ್ದರು.

ಈ ದೂರು ಆಧರಿಸಿ ಎಸಿಬಿಯು ಯಡಿಯೂರಪ್ಪ ವಿರುದ್ಧ ಆ.10ರಂದು ಮೊದಲನೆ ಮತ್ತು ಆ.17ರಂದು ಎರಡನೆ ಎಫ್‌ಐಆರ್ ದಾಖಲಿಸಿತ್ತು. ಈ ಎರಡೂ ಎಫ್‌ಐಆರ್‌ಗಳ ರದ್ದತಿಗೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಪ್ರತ್ಯೇಕ ಎರಡು ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News