ಕನ್ಯಾಸಂಸ್ಕಾರಕ್ಕೆ ಹವ್ಯಕ ಒಕ್ಕೂಟ ವಿರೋಧ: ರಾಘವೇಶ್ವರ ಶ್ರೀ ಪೀಠ ತ್ಯಜಿಸುವಂತೆ ಆಗ್ರಹ

Update: 2017-08-22 15:58 GMT

ಬೆಂಗಳೂರು, ಆ.22: ಇತ್ತೀಚಿಗೆ ಗಿರಿನಗರದ ರಾಮಚಂದ್ರಾಪುರ ಮಠದಲ್ಲಿ ‘ಕನ್ಯಾ ಸಂಸ್ಕಾರ’ ನಡೆಸಿದ್ದಕ್ಕೆ ಅಖಿಲ ಹವ್ಯಕ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದ್ದು, ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತಿ ಸ್ವಾಮೀಜಿ ಕೂಡಲೇ ಪೀಠವನ್ನು ತ್ಯಜಿಸಬೇಕು ಎಂದು ಹವ್ಯಕ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಗಣೇಶ್ ಭಟ್, ಭಾರತಿ ಸ್ವಾಮೀಜಿ ಕನ್ಯಾ ಸಂಸ್ಕಾರದ ಹೆಸರಿನಲ್ಲಿ ಅಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ. ಧಾರ್ಮಿಕ ಆಚರಣೆಗಳಿಗೆ ಹಾಗೂ ಮಠದ ಪಾರಂಪರಿಕತೆಗೆ ಧಕ್ಕೆ ತರುತ್ತಿದ್ದಾರೆ. ಹೀಗಾಗಿ ಅವರು ಪೀಠಾಧಿಪತಿಗಳಾಗಿ ಮುಂದುವರಿಯಲು ಅನರ್ಹರು ಎಂದು ಹೇಳಿದರು.

ಕನ್ಯಾ ಸಂಸ್ಕಾರದ ಹೆಸರಿನಲ್ಲಿ ಹದಿ ಹರೆಯದ ಬಾಲೆಯರೊಂದಿಗೆ ಗುಪ್ತವಾದ ಕೊಠಡಿಯಲ್ಲಿ ಏಕಾಂತವನ್ನು ಅನುಭವಿಸುವಂತೆ ಹೇಳುತ್ತಾರೆ. ಈ ಏಕಾಂತದಲ್ಲಿ ಏನು ನಡೆಯಿತು ಎಂದು ಯಾರೊಂದಿಗೂ ಹೇಳಬಾರದು ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾರೆ ಎಂದು ಕನ್ಯಾ ಸಂಸ್ಕಾರಕ್ಕೆ ಒಳಪಟ್ಟ ಹಲವು ಯುವತಿಯರು ಬಹಿರಂಗಪಡಿಸಿದ್ದಾರೆ. ಇಲ್ಲಿ ಹಲವು ಅನುಚಿತ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದರು.

ಒಕ್ಕೂಟದ ಸದಸ್ಯ ಬೆಣ್ಣೆಗದ್ದೆ ನಾರಾಯಣ ಭಟ್ಟ ಮಾತನಾಡಿ, ಶಾಸ್ತ್ರಗಳ ಪ್ರಕಾರ ಕನ್ಯಾ ಸಂಸ್ಕಾರವನ್ನು 8 ನೆ ವಯಸ್ಸಿನ ಒಳಗಿನವರಿಗೆ ನೀಡಬೇಕು. ಆದರೆ, ಈ ಸ್ವಾಮೀಜಿ ಪ್ರಾಯಕ್ಕೆ ಬಂದವರಿಗೆ ಕನ್ಯಾ ಸಂಸ್ಕಾರ ಮಾಡುತ್ತಿರುವುದು ಎಷ್ಟು ಸರಿ. ಕನ್ಯಾ ಸಂಸ್ಕಾರ ಮೂಲತಃ ಉಪಶಮನಕ್ಕೆ ಸಮಾನವಾದದ್ದು. ಉಪಶಮನ ಗಂಡು ಮಕ್ಕಳಿಗೆ ನೀಡಿದರೆ, ಕನ್ಯಾ ಸಂಸ್ಕಾರ ಹೆಣ್ಣು ಮಕ್ಕಳಿಗೆ ನೀಡುತ್ತಾರೆ. ಆದರೆ, ಕನ್ಯಾ ಸಂಸ್ಕಾರವನ್ನು ತಂದೆ-ತಾಯಿ ಅಥವಾ ಪೋಷಕರು ನೀಡುವುದೇ ವಿನಹಃ, ಮಠಾಧಿಪತಿಗಳು ಮಾಡುವಂತಿಲ್ಲ ಎಂದು ಹೇಳಿದರು.

ಒಕ್ಕೂಟದ ಗೌರವಾಧ್ಯಕ್ಷ ಶ್ರೀಧರ್ ವಿ ಹೆಗ್ಡೆ ಮಾತನಾಡಿ, ರಾಘವೇಶ್ವರ ಭಾರತಿ ಸ್ವಾಮೀಜಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ ವರದಿಯಾದ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿ ಹಾಗೂ ಅವರ ಬೆಂಬಲಿಗರು ಮಠದಲ್ಲಿ ಯಾವುದೇ ಕನ್ಯಾಸಂಸ್ಕಾರ ನಡೆದಿಲ್ಲ ಎಂದು ಹೇಳಿದ್ದರು. ಈಗ ಅದೇ ಆಡಳಿತ ಮಂಡಳಿ 2010 ರಿಂದ ಕನ್ಯಾ ಸಂಸ್ಕಾರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಮಠದಲ್ಲಿ ಏಕಾಂತವಾಗಿ ಕನ್ಯಾ ಸಂಸ್ಕಾರ ನಡೆದಿರುವ ದಾಖಲೆಗಳಿದ್ದರೆ ಕೂಡಲೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಕನ್ಯಾ ಸಂಸ್ಕಾರ ಎಂಬುದು ರಾಜ್ಯದ ಯಾವುದೇ ಮಠಗಳಲ್ಲಿಯೂ ನಡೆಯುತ್ತಿಲ್ಲ. ಆದರೆ, ಈ ಮಠದ ಆಡಳಿತ ಮಂಡಳಿ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ರಾಘವೇಶ್ವರ ಭಾರತಿ ಸ್ವಾಮೀಜಿಗಳ ಹಿಂದಿನ ಭೂ ಕಬಳಿಕೆ, ದೇವಾಲಯಗಳ ಕಬಳಿಕೆ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ದೇಶಿ ತಳಿ ಸಂರಕ್ಷಣೆ, ಗೋ ರಕ್ಷಣೆ, ಹಾಲು ಹಬ್ಬ ಹಾಗೂ ಕನ್ಯಾ ಸಂಸ್ಕಾರ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ, ಸ್ವಾಮೀಜಿಯ ಅಕ್ರಮ ಚಟುವಟಿಕೆಗಳ ಕುರಿತು ಪ್ರಶ್ನಿಸುವವರ ಮೇಲೆ ತಮ್ಮ ಶಿಷ್ಯರ ಪ್ರಭಾವ ಬಳಸಿಕೊಂಡು ಹಲ್ಲೆ ಮಾಡಿಸುವುದು, ಬೆದರಿಕೆ ಹಾಕಿಸುವುದು ಹಾಗೂ ಸುಳ್ಳು ಮೊಕದ್ದಮೆಗಳನ್ನು ಹಾಕಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಸಿ.ಎಚ್.ಎಸ್.ಭಟ್, ನರಸಿಂಹಮೂರ್ತಿ ಸೇರದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News