ಉತ್ತರ ಪ್ರದೇಶ ಸರಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

Update: 2017-08-22 16:11 GMT

ಬೆಂಗಳೂರು, ಆ.22: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನೂರಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾದ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಎಸ್‌ಯುಸಿಐ (ಸಿ) ಪಕ್ಷದ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪಕ್ಷದ ಕಾರ್ಯದರ್ಶಿ ವಿ.ಜ್ಞಾನಮೂರ್ತಿ, ಉತ್ತರಪ್ರದೇಶದ ಸರಕಾರವು ಜನ ಸಾಮಾನ್ಯರಿಗೆ ಸರಿಯಾದ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿಲ್ಲ. ಆದರೆ, ಗೋವುಗಳಿಗೆ ಆ್ಯಂಬುಲೆನ್ಸ್‌ಗಳನ್ನು ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಮಕ್ಕಳಿಗೆ ಆಮ್ಲಜನಕ ಸಿಲಿಂಡರ್ ಪೂರೈಕೆ ಮಾಡುತ್ತಿರುವ ಕಂಪನಿಯು ಅನೇಕ ಬಾರಿ ಬಾಕಿ ಹಣವನ್ನು ಕಟ್ಟುವಂತೆ ಮನವಿ ಮಾಡಿದೆ. ಆದರೆ, ಆರೋಗ್ಯ ಇಲಾಖೆಯಾಗಲಿ ಅಥವಾ ಸರಕಾರವಾಗಲಿ ಈ ಕುರಿತು ಗಂಭೀರ ಕ್ರಮ ಕೈಗೊಳ್ಳದೇ ನಿರ್ಲಕ್ಷ ಧೋರಣೆ ಅನುಸರಿಸಿದೆ. ಇದರಿಂದಾಗಿ ನೂರು ಮಕ್ಕಳ ದುರ್ಮರಣ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಮಿತಿ ಸದಸ್ಯೆ ಕೆ.ಎಸ್.ರಜನಿ ಮಾತನಾಡಿ, ಸ್ವಾತಂತ್ರ ಬಂದು 7 ದಶಕಗಳು ಕಳೆಯುತ್ತಿದ್ದರೂ ನಮ್ಮನ್ನಾಳುತ್ತಿರುವ ಸರಕಾರಗಳು ಸಮರ್ಪಕವಾದ ಆರೋಗ್ಯ ಸೇವೆ ನೀಡುವುದರಲ್ಲಿ ವಿಫಲವಾಗಿವೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಸರಕಾರ ಮೊದಲಿನಿಂದಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಮಾಡಲು ವ್ಯವಸ್ಥಿತವಾದ ಹುನ್ನಾರ ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಈ ದುರಂತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರ ನೇರ ಹೊಣೆ ಹೊರಬೇಕು ಹಾಗೂ ಸೂಕ್ತ ತನಿಖೆಯಾಗಬೇಕು. ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಮತ್ತು ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News