ಪೆರೋಲ್ ಮೇಲೆ ಬಿಡುಗಡೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುವುದು: ಹೈಕೋರ್ಟ್

Update: 2017-08-22 16:33 GMT

 ಬೆಂಗಳೂರು, ಆ.22: ಅಪರಾಧಿಗಳನ್ನು ಜೈಲಿನಿಂದ 'ಪೆರೋಲ್' ಮೇಲೆ ಬಿಡುಗಡೆ ಮಾಡುವ ಅಧಿಕಾರದ ಕಾನೂನಿನ ಸಿಂಧುತ್ವವನ್ನೇ ಹೈಕೋರ್ಟ್ ಪ್ರಶ್ನೆ ಮಾಡಿದ್ದು, ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿ ತಲೆಮರಿಸಿಕೊಂಡಿರುವ ಕೈದಿಗಳನ್ನು ಬಂಧಿಸುವಲ್ಲಿ ಜೈಲು ಪ್ರಾಧಿಕಾರಗಳು ಕರ್ತವ್ಯ ಲೋಪ ಎಸಗಿದೆ. ಹೀಗಾಗಿ, ರಾಜ್ಯದಲ್ಲಿ 2006ರಿಂದ 2014ರವರೆಗೆ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿ ತಲೆಮರಿಸಿಕೊಂಡಿರುವ ಕೈದಿಗಳನ್ನು ಬಂಧಿಸುವಲ್ಲಿ ವಿಫಲರಾಗಿರುವ ಕೇಂದ್ರ ಕಾರಾಗೃಹಗಳ ಕ್ರಮದ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹ ಅವರಿದ್ದ ವಿಭಾಗೀಯ ಪೀಠ, ಸಮರ್ಪಕವಾದ ತನಿಖೆ ನಡೆಸುವ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ನ್ಯಾಯಾಲಯಕ್ಕೆ ಅಗತ್ಯ ಸಲಹೆ ನೀಡಬೇಕು ಎಂದು ಸೂಚಿಸಿತು.

ಇದಕ್ಕೂ ಮುನ್ನ ಕೈದಿಗಳು ಪೆರೋಲ್ ಮೇಲೆ ಬಿಡುಗಡೆಯಾಗಿ ವಾಪಸ್ಸಾಗದೇ ಇದ್ದಾಗ ಅವರನ್ನು ಬಂಧಿಸುವುದು ಜೈಲು ಅಧಿಕಾರಿಗಳ ಮುಖ್ಯ ಕರ್ತವ್ಯ. ಆದರೆ, ಈವರೆಗೆ 42 ಪ್ರಕರಣಗಳನ್ನು ಬಂಧಿಸಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಸರಕಾರ ತನ್ನ ಕರ್ತವ್ಯವನ್ನು ತಾನೇ ಮಾಡಬೇಕು. ಕೋರ್ಟ್ ಮಾಡಿಸುವುದಕ್ಕೆ ಆಗುವುದಿಲ್ಲ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

ನ್ಯಾಯಾಲಯವು ಆದೇಶಿಸಿದ ನಂತರವಷ್ಟೇ ಸರಕಾರ ಹಾಗೂ ಅಧಿಕಾರಿಗಳು ಬಂಧನಕ್ಕೆ ಕ್ರಮಕೈಗೊಳ್ಳುತ್ತದೆ. ಅದಕ್ಕೂ ಮುನ್ನ ವೌನ ವಹಿಸಿರುತ್ತದೆ. ಕೋರ್ಟ್ ನಿರ್ದೇಶಿಸಿದಾಗ ಸರಕಾರ ದಿಢೀರ್ ಒಳ್ಳೆಯ ಹುಡುಗ ರೀತಿ ವರ್ತಿಸುತ್ತದೆ. ಇದು ಸರಿಯಲ್ಲ. ಇದರಲ್ಲಿ ಮೇಲಿನಿಂದ ಕೆಳಗಿನ ಅಧಿಕಾರಿಯವರೆಗೂ ಕರ್ತವ್ಯ ಲೋಪ ಎಸಗಿದ್ದಾರೆ. ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪವಾದರೆ ಬಿಡಬಹುದು. ಆದರೆ ಇಲ್ಲಿ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ಇದೆಲ್ಲವನ್ನೂ ನೋಡಿಕೊಂಡು ಕೋರ್ಟ್ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಕಿಡಿಕಾರಿದೆ.

ಅಲ್ಲದೆ, 2006ರಿಂದ ಈ ಅರ್ಜಿ ದಾಖಲಾಗುವರೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿರುವ ಪ್ರಕರಣಗಳ ತನಿಖೆ ನಡೆಸಲಾಗುವುದು. ಇದು ಒಂದು ಸತ್ಯಶೋಧನೆ ಮಿಷನ್ ಆಗಿದೆ. ತನಿಖೆ ನಡೆಸಲು ಒಬ್ಬರನ್ನು ನೇಮಕ ಮಾಡಲಾಗುವುದು. ಆದರೆ, ಯಾವ ವ್ಯಕ್ತಿಯಿಂದ ಹಾಗೂ ಹೇಗೆ ತನಿಖೆ ನಡೆಸಬೇಕು ಎಂಬುದರ ಕುರಿತ ಕೋರ್ಟ್ ಮುಂದೆ ಚರ್ಚಿಸುತ್ತದೆ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News