ಚಿಕ್ಕಮಗಳೂರು: ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ

Update: 2017-08-22 18:34 GMT

ಚಿಕ್ಕಮಗಳೂರು, ಆ.22: ಕಳೆದ ಐದು ವರ್ಷಗಳ ಹಿಂದೆ ಕೇವಲ 3/4 ವಿದ್ಯಾರ್ಥಿಗಳಿಂದ ಮುಚ್ಚುವ ಸ್ಥಿತಿಯಲ್ಲಿದ್ದ ತರೀಕೆರೆ ತಾಲೂಕಿನ ಬೇಲೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ.

ಅದು ದಶಕಗಳ ಇತಿಹಾಸ ಹೊಂದಿದ ಸರಕಾರಿ ಶಾಲೆ. ಕೆಲವು ವರ್ಷಗಳ ಹಿಂದೆ ಸುತ್ತಮುತ್ತಲ ಹಳ್ಳಿಗಳ ಮಕ್ಕಳಿಗೆ ಈ ಶಾಲೆಯೇ ಜ್ಞಾನದೇಗುಲ. ಆದರೆ 5 ವರ್ಷಗಳ ಹಿಂದೆ ಖಾಸಗಿ ಶಾಲೆಗಳ ಭರಾಟೆಗೆ ಸಿಲುಕಿ ಈ ಶಾಲೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿತ್ತು. ಅಂದು ಗ್ರಾಮಸ್ಥರು ಹಾಗೂ ಶಿಕ್ಷಕರು ಮಾಡಿದ ಯೋಜನೆಯೊಂದು ಇನ್ನೇನು ಮುಚ್ಚುಲಿದ್ದ ಶಾಲೆಗೆ ಜೀವಕಳೆ ತುಂಬಿ ಬಿಟ್ಟಿತ್ತು. ಆ ಶಾಲೆ ಈಗ ಅದೆಷ್ಟೋ ಶಾಲೆಗಳಿಗೆ ಮಾದರಿಯಾಗಿದೆ.

  ಬೇಲೇನಹಳ್ಳಿ ಗ್ರಾಮವು ತರೀಕೆರೆ ಮತ್ತು ಭದ್ರಾವತಿ ತಾಲೂಕು ಕೇಂದ್ರಗಳಿಗೆ ಹತ್ತಿರವಾಗಿದ್ದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದರು. ಈ ವೇಳೆ ದಶಕಗಳ ಇತಿಹಾಸ ಇರುವ ಬೇಲೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇವಲ 3/4 ವಿದ್ಯಾರ್ಥಿಗಳು ದಾಖಲಾಗಿದ್ದರಿಂದ ಶಿಕ್ಷಣ ಇಲಾಖೆ ಈ ಶಾಲೆಯನ್ನು ಮುಚ್ಚಲು ತೀರ್ಮಾನಿಸಿತ್ತು. ಈ ವೇಳೆ ಗ್ರಾಮಸ್ಥರು ತನ್ನೂರಿನ ಶಾಲೆಯನ್ನು ಉಳಿಸಿಕೊಳ್ಳಲು ತಮ್ಮ ಮಕ್ಕಳನ್ನು ಇದೇ ಗ್ರಾಮದ ಶಾಲೆಗೆ ದಾಖಲಿಸಿದರು.

 ಮೊದಲು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ತಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಗೆ ದಾಖಲಿಸಿದರು. ಬಳಿಕ ಸುತ್ತಮುತ್ತಲ ಗ್ರಾಮಸ್ಥರನ್ನು ಮನವೊಲಿಸಿದರು. ಈ ನಡುವೆ ಈ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಲಾಯಿತು. ಇದಕ್ಕೆ ಸರಕಾರಿ ಶಿಕ್ಷಕರನ್ನು ಹೊರತು ಪಡಿಸಿ ಇಬ್ಬರು ಖಾಸಗಿ ಶಿಕ್ಷಕರನ್ನು ಎಸ್‌ಡಿಎಂಸಿ ಮೂಲಕ ನೇಮಕ ಮಾಡಿಕೊಂಡು ಪೋಷಕರು ಹಣ ಸಂಗ್ರಹಿಸಿ ಹೆಚ್ಚುವರಿ ಖಾಸಗಿ ಶಿಕ್ಷಕರಿಗೆ ನೀಡಿದರು. ಈಗ ಶಾಲೆ ಮತ್ತೆ ಹಿಂದಿನಂತೆ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕಂಗೊಳಿಸುತ್ತಿದೆ.

ಮುಚ್ಚುವ ಭೀತಿಯಲ್ಲಿದ್ದ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಬೇಲೇನಹಳ್ಳಿ ಗ್ರಾಮಸ್ಥರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ. ಎಲ್ಲಾ ಗ್ರಾಮಸ್ಥರು ತನ್ನೂರಿನ ಸರಕಾರಿ ಶಾಲೆಗಳ ಬಗ್ಗೆ ಇಷ್ಟೇ ಆಸಕ್ತಿ ವಹಿಸಿದರೆ ಬೀಗ ಜಡಿಯುವ ಸರಕಾರಿ ಶಾಲೆಗಳಿಗೆ ಮತ್ತೆ ಜೀವ ಬರುವುದರಲ್ಲಿ ಸಂಶಯವಿಲ್ಲ.

ಬೇಲೇನಹಳ್ಳಿ ಶಾಲೆಗೆ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳನ್ನು ಕರೆ ತರಲು ಎಸ್‌ಡಿಎಂಸಿ ಮೂಲಕ ಪೋಷಕರ ಬಳಿ ಹಣ ಸಂಗ್ರಹಿಸಿ ವಾಹನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನಗರಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಸೆಳೆಯಲು ಇಂಗ್ಲಿಷ್ ಮಾಧ್ಯಮದಲ್ಲಿ ಸಹ ಪಾಠಗಳು ನಡೆಯುತ್ತಿವೆೆ. ಎಲ್‌ಕೆಜಿ, ಯುಕೆಜಿ ಕಲಿಸಲು ಪ್ರತ್ಯೇಕ ಖಾಸಗಿ ಶಿಕ್ಷಕರನ್ನು ಪೋಷಕರ ಸಹಾಯದಿಂದಲೇ ತೆಗೆದುಕೊಳ್ಳಲಾಗಿದೆ.

 ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷರು.

ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವ ಅವಕಾಶಗಳನ್ನು ಒದಗಿಸಲಾಗಿದೆ. ಹೀಗಾಗಿ 5 ವರ್ಷಗಳ ಹಿಂದೆ 3/4 ವಿದ್ಯಾರ್ಥಿಗಳಿಂದ ಮುಚ್ಚುವ ಭೀತಿಯಲ್ಲಿದ್ದ ಶಾಲೆಯಲ್ಲಿ ಈಗ 250 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರತಿವರ್ಷ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದೆ.
ಜ್ಯೋತಿ, ಮುಖ್ಯ ಶಿಕ್ಷಕರು.

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News