ಭಾರತದ ಜೂನಿಯರ್ ಹಾಕಿ ತಂಡಕ್ಕೆ ಜೂಡ್ ಫೆಲಿಕ್ಸ್ ಕೋಚ್

Update: 2017-08-22 18:36 GMT

ಹೊಸದಿಲ್ಲಿ, ಆ.22: ಮಾಜಿ ನಾಯಕ ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ ಅವರನ್ನು ಭಾರತದ ಜೂನಿಯರ್ ಪುರುಷರ ಹಾಕಿ ತಂಡದ ಕೋಚ್‌ರನ್ನಾಗಿ ಹಾಕಿ ಇಂಡಿಯಾ ಮಂಗಳವಾರ ನೇಮಕ ಮಾಡಿದೆ.

ಜೂನಿಯರ್ ಪುರುಷರ ತಂಡ ಇತ್ತೀಚೆಗೆ ಯುರೋಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಯುರೋಪ್ ಪ್ರವಾಸದಲ್ಲಿ ಕಳೆದ ವರ್ಷ ವಿಶ್ವಕಪ್‌ನ್ನು ಜಯಿಸಿದ್ದ ತಂಡದಲ್ಲಿದ್ದ 9 ಆಟಗಾರರು ಆಡಿದ್ದರು.

‘‘ಫೆಲಿಕ್ಸ್ ಭಾರತದ ನಾಯಕನಾಗಿ ಅಪಾರ ಅನುಭವ ಪಡೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತದ ಕಿರಿಯರ ಹಾಕಿ ತಂಡವನ್ನು ಮತ್ತಷ್ಟು ಬಲಪಡಿಸಲು ಯೋಜನೆ ಹಾಕಿಕೊಂಡಿದ್ದೇವೆ. 2020 ಹಾಗೂ 2024ರ ಒಲಿಂಪಿಕ್ ಗೇಮ್ಸ್‌ನಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಹಾಕಿ ಇಂಡಿಯಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’’ ಎಂದು ಭಾರತದ ಉನ್ನತ ಪ್ರದರ್ಶನದ ನಿರ್ದೇಶಕ ಡೇವಿಡ್ ಜಾನ್ ಹೇಳಿದ್ದಾರೆ.

1995ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದ ಫೆಲಿಕ್ಸ್ ತಂಡದ ಪ್ರಮುಖ ಆಟಗಾರ ಹಾಗೂ ನಾಯಕನಾಗಿದ್ದರು. 1993ರ ವಿಶ್ವಕಪ್ ಹಾಗೂ 1994ರ ಏಷ್ಯನ್ ಗೇಮ್ಸ್‌ನಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. 250ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಫೆಲಿಕ್ಸ್ ಭಾರತದ ಪರ ಎರಡು ವಿಶ್ವಕಪ್ ಹಾಗೂ ಏಷ್ಯನ್ ಗೇಮ್ಸ್‌ನ್ನು ಆಡಿದ್ದರು. 1985, 1987 ಹಾಗೂ 1989ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.1997ರಲ್ಲಿ ಹಾಲೆಂಡ್‌ನ ಅಂಡರ್-18 ತಂಡಕ್ಕೆ ಕೋಚಿಂಗ್ ನೀಡಿದ್ದರು. 2014ರಲ್ಲಿ ಭಾರತದ ಸೀನಿಯರ್ ತಂಡದ ಸಹಾಯಕ ಕೋಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News