ಸ್ವದೇಶಿ ಭಯೋತ್ಪಾದಕರಿಗೆ ಹಾಲೆರೆಯದಿರೋಣ

Update: 2017-08-22 19:01 GMT

ಮಾಲೆಗಾಂವ್ ಸ್ಫೋಟದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರಜ್ಞಾ ಸಿಂಗ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ ಬೆನ್ನಿಗೇ, ಇದೀಗ ಇನ್ನೋರ್ವ ಶಂಕಿತ ಉಗ್ರ ಶ್ರೀಕಾಂತ್ ಪ್ರಸಾದ್ ಪುರೋಹಿತ್‌ಗೂ ಸೋಮವಾರ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಈ ಹಿಂದೆ ಬಾಂಬೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತಾದರೂ, ಸುಪ್ರೀಂಕೋರ್ಟ್ ಆ ತೀರ್ಪನ್ನು ನಿರಾಕರಿಸಿ ಜಾಮೀನು ನೀಡಲು ಸಮ್ಮತಿಸಿದೆ. ಪ್ರಜ್ಞಾಸಿಂಗ್ ಆಗಲಿ, ಪುರೋಹಿತ್ ಆಗಲಿ ಅಮಾಯಕರೆನ್ನುವುದನ್ನು ನಿರೂಪಿಸಲು ಈವರೆಗೆ ನ್ಯಾಯವಾದಿಗಳಿಗಾಗಲಿ, ಯಾವುದೇ ತನಿಖಾ ಸಂಸ್ಥೆಗಳಿಗಾಗಲಿ ಸಾಧ್ಯವಾಗಿಲ್ಲ. ಈ ದೇಶದಲ್ಲಿ ಸಂಭವಿಸಿದ ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟ, ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳು ಈ ದೇಶದ ಅಖಂಡತೆಗೆ ಎರಡು ರೀತಿಯಲ್ಲಿ ಧಕ್ಕೆಯನ್ನು ತಂದಿತ್ತು.

ಈ ಹಿಂದೆ ಎಲ್ಲ ಸ್ಫೋಟಗಳನ್ನು ವಿದೇಶಿ ಉಗ್ರರ ತಲೆಗೆ ಕಟ್ಟಿ, ಅದಕ್ಕಾಗಿ ಪಾಕಿಸ್ತಾನವನ್ನು ಜರೆಯುವ ಅವಕಾಶ ನಮಗಿತ್ತು. ಆದರೆ ಎಟಿಎಸ್ ಮುಖಂಡ ಹೇಮಂತ್ ಕರ್ಕರೆ ಮತ್ತು ಅವರ ತಂಡ ನಡೆಸಿದ ತನಿಖೆ, ಭಯೋತ್ಪಾದನೆ ಈ ದೇಶದಲ್ಲೇ ಬೇರಿಳಿಸಿರುವುದನ್ನು ಬೆಳಕಿಗೆ ತಂದಿತು. ಅಭಿನವ ಭಾರತ, ಸನಾತನ ಸಂಸ್ಥೆಯ ಸಂಘಟನೆಗಳು ಇದರಲ್ಲಿ ಪರೋಕ್ಷವಾಗಿ ಭಾಗಿಯಾಗಿರುವುದನ್ನು ಈ ತಂಡ ಬಯಲಿಗೆಳೆಯುವ ಮೂಲಕ, ದೇಶವೇ ಬೆಚ್ಚಿ ಬೀಳಿಸುವ ನಗ್ನ ಸತ್ಯಗಳು ಹೊರಬಂದವು. ದೇಶಭಕ್ತರ ಮುಖವಾಡ ಹಾಕಿ, ದೇಶದ್ರೋಹಿ ಚಟುವಟಿಕೆ ನಡೆಸುತ್ತಿರುವವರ ಬಂಡವಾಳ ತನಿಖೆಯಿಂದ ಒಂದೊಂದಾಗಿ ಹೊರ ಬರಲಾರಂಭಿಸಿದವು. ಆವರೆಗೆ ಅಜ್ಮೀರ್, ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್‌ನಂತಹ ಸ್ಫೋಟಗಳಿಗೆ ತನಿಖಾ ಸಂಸ್ಥೆಗಳು ಕೆಲವು ಮುಸ್ಲಿಮ್ ಹೆಸರಿನ ಉಗ್ರವಾದಿ ಸಂಘಟನೆಗಳನ್ನು ಹೊಣೆ ಮಾಡಿ, ನೂರಾರು ಅಮಾಯಕರನ್ನು ಜೈಲಿಗೆ ತಳ್ಳಿತ್ತು. ಈ ಸನಾತನ ಭಯೋತ್ಪಾದಕರು ಸ್ಫೋಟಗಳನ್ನು ನಡೆಸಿದ್ದೇ ಅಲ್ಲದೆ, ದೇಶದೊಳಗಿನ ಮುಸ್ಲಿಮರ ವಿರುದ್ಧವೇ ಅನುಮಾನಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದರು. ಒಂದೆಡೆ ದೇಶದೊಳಗೆ ಸ್ಫೋಟ ನಡೆಸಿ ಅಮಾಯಕರನ್ನು ಕೊಂದು ಹಾಕುವುದು. ಇನ್ನೊಂದೆಡೆ ದೇಶದಲ್ಲಿ ಜನರ ನಡುವೆಯೇ ಅನುಮಾನಗಳನ್ನು ಬಿತ್ತಿ ಸಮಾಜವನ್ನು ಒಡೆಯುವುದು ಈ ಕೇಸರಿ ಉಗ್ರರ ಗುರಿಯಾಗಿತ್ತು.

ಹೇಮಂತ್ ಕರ್ಕರೆ ತಂಡ ಈ ಭಯೋತ್ಪಾದಕರ ಬೇರುಗಳನ್ನು ತಡವುತ್ತಾ ಆರೆಸ್ಸೆಸ್ ಮುಖಂಡ ಇಂದ್ರೇಶ್‌ವರೆಗೂ ತಲುಪಿತ್ತು. ಆದರೆ ಮುಂಬೈಯ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಹೇಮಂತ್ ಕರ್ಕರೆ ಮತ್ತು ಈ ಕೇಸರಿ ಉಗ್ರರ ಕುರಿತಂತೆ ತನಿಖೆಯ ನೇತೃತ್ವವನ್ನು ವಹಿಸಿದ ಎಲ್ಲ ಅಧಿಕಾರಿಗಳೂ ಕೊಲ್ಲಲ್ಪಟ್ಟರು. ಈಗಲೂ ಈ ಅಧಿಕಾರಿಗಳ ಕಗ್ಗೊಲೆ ನಿಗೂಢವಾಗಿಯೇ ಉಳಿದಿದೆ. ಇವರನ್ನು ಯಾಕೆ ಕೊಲ್ಲಲಾಯಿತು? ಇವರ ಸಾವಿನಿಂದ ನಿಜಕ್ಕೂ ಲಾಭವಾದುದು ಯಾರಿಗೆ? ಎಂಬ ಪ್ರಶ್ನೆ ಹಲವು ಚರ್ಚೆಗೊಳಗಾಗಿವೆ. ಕರ್ಕರೆ ಮತ್ತು ಅವರ ತಂಡದ ಹತ್ಯೆಯ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವ ಅಗತ್ಯವನ್ನು ಕೆಲವು ರಾಜಕಾರಣಿಗಳು ಮತ್ತು ಚಿಂತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರಾದರೂ ಆ ಧ್ವನಿಯನ್ನು ಅಡಗಿಸಲಾಯಿತು.

ಕರ್ಕರೆ ಮತ್ತು ಇತರ ಅಧಿಕಾರಿಗಳ ಹತ್ಯಾಕಾಂಡವನ್ನು ಪ್ರತ್ಯೇಕವಾಗಿ ತನಿಖೆ ನಡೆಸುವುದು ಮುಂಬೈ ದಾಳಿಯ ವಿಚಾರಣೆಯನ್ನು ದಾರಿ ತಪ್ಪಿಸಬಹುದು ಎನ್ನುವ ಕಾರಣಕ್ಕಾಗಿ ಆ ಬೇಡಿಕೆಯನ್ನು ದಮನಿಸಲಾಯಿತು. ಕೊಲೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಸಾಬೀತು ಮಾಡುವುದರಲ್ಲಿ ಇರುವ ಆಸಕ್ತಿ, ನಮ್ಮದೇ ದೇಶದ ಅತ್ಯುನ್ನತ ಅಧಿಕಾರಿಗಳ ಸಾವಿನ ನಿಗೂಢತೆಯನ್ನು ಭೇಧಿಸುವುದರಲ್ಲಿ ಇರಲಿಲ್ಲ. ಆದರೆ ಇದೀಗ ಅದರ ಪರಿಣಾಮವನ್ನಂತೂ ನಾವು ಎದುರಿಸಬೇಕಾಗಿದೆ. ಕರ್ಕರೆ ತಂಡ ಬಹಿರಂಗಪಡಿಸಿದ ಕೇಸರಿ ಭಯೋತ್ಪಾದನೆಯ ಹಿಂದಿರುವ ಒಬ್ಬೊಬ್ಬರೇ ಆರೋಪಿಗಳು ಕಾನೂನಿನ ಹಿಡಿತದಿಂದ ನುಣುಚಿಕೊಳ್ಳುತ್ತಿದ್ದಾರೆ. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದು ಮುಖ್ಯವಾಗಿ ಈ ದೇಶವನ್ನು ಹುತ್ತವನ್ನಾಗಿಸಿಕೊಂಡಿರುವ ಕೇಸರಿ ಉಗ್ರವಾದಿ ಗುಂಪುಗಳಿಗೆ ಅತ್ಯಗತ್ಯವಾಗಿತ್ತು. ಯಾಕೆಂದರೆ, ತಮ್ಮದೇ ಸರಕಾರ ಅಸ್ತಿತ್ವಕ್ಕೆ ಬಂದು, ತನಿಖಾಧಿಕಾರಿಗಳನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸದೇ ಇದ್ದರೆ ನೇರವಾಗಿ ಆರೆಸ್ಸೆಸ್‌ನ ಬುಡಕ್ಕೇ ಬಂದು ಬಿಡುವ ಅಪಾಯವಿತ್ತು. ನಿರೀಕ್ಷೆಯಂತೆಯೇ, ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಪ್ರಕರಣಗಳು ಮರುತನಿಖೆಗೆ ಒಳಪಟ್ಟವು.

ಪ್ರಕರಣಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ದುರ್ಬಲಗೊಳಿಸಲು ತನಿಖಾ ಸಂಸ್ಥೆಯನ್ನೇ ಬಳಸಿಕೊಳ್ಳಲಾಗಿದೆ ಎನ್ನುವುದು, ಸರಕಾರಿ ವಕೀಲರಾಗಿ ಕಾರ್ಯನಿರ್ವಹಿಸಿದ್ದ ರೋಹಿಣಿ ಸಾಲ್ಯಾನ್ ಅವರ ಹೇಳಿಕೆಯಿಂದ ಈಗಾಗಲೇ ಬಹಿರಂಗವಾಗಿದೆ. ಆರೋಪಿಗಳ ವಿರುದ್ಧ ವಾದಿಸುವಾಗ ಮೃದು ನಿಲುವು ತಳೆಯಬೇಕು ಎಂದು ಎನ್‌ಐಎ ತನಿಖಾ ಸಂಸ್ಥೆಯ ಅಧಿಕಾರಿಗಳು ಒತ್ತಡ ಹೇರಿದ್ದರು ಎನ್ನುವುದನ್ನು ಸಾಲ್ಯಾನ್ ಆರೋಪಿಸಿದ್ದರು. ಈ ಕಾರಣದಿಂದಲೇ ಅವರು ತಮ್ಮ ಸ್ಥಾನವನ್ನು ತೊರೆದಿದ್ದರು. ಇದು ದೇಶದಲ್ಲಿ ಬೀಡು ಬಿಟ್ಟಿರುವ ಕೇಸರಿ ಭಯೋತ್ಪಾದಕರ ಕುರಿತಂತೆ ನಡೆಯುತ್ತಿರುವ ತನಿಖೆ ಯಾವ ದಾರಿಯಲ್ಲಿ ಸಾಗುತ್ತಿದೆ ಎನ್ನುವುದನ್ನು ಹೇಳುತ್ತಿತ್ತು. ಭಯೋತ್ಪಾದಕರು ನಡೆಸಿದ ಸ್ಫೋಟ ಚಟುವಟಿಕೆಗಳಿಗೆ ಸಂಬಂಧಿಸಿ ಸಾಕ್ಷಗಳನ್ನು ಸಂಗ್ರಹಿಸಿ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಪಕ್ಕಕ್ಕಿರಲಿ, ಸ್ವತಃ ಅಧಿಕಾರಿಗಳೇ ಆರೋಪಿಗಳ ವಿರುದ್ಧ ಮೃದುವಾಗಿ ನಡೆದುಕೊಂಡರೆ ಅವರಿಗೆ ಶಿಕ್ಷೆಯಾಗುವುದಾದರೂ ಸಾಧ್ಯ? ಅಂದರೆ ತನಿಖಾ ಸಂಸ್ಥೆಯೊಳಗೂ ದೇಶವಿರೋಧಿ ಭಯೋತ್ಪಾದನಾ ಚಟುವಟಿಕೆಗಳ ಕುರಿತಂತೆ ಮೃದು ನಿಲುವನ್ನು ಹೊಂದಿದವರು ಹೇಗೆ ನುಸುಳಿಕೊಂಡಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಹೀಗಿರುವಾಗ ಪ್ರಜ್ಞಾಸಿಂಗ್ ಅಥವಾ ಪುರೋಹಿತ್‌ನಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುವುದರಲ್ಲಿ ಅಚ್ಚರಿಯೇನಿದೆ?

ಕೇಸರಿ ಭಯೋತ್ಪಾದಕರು ಒಬ್ಬೊಬ್ಬರಾಗಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಶಂಕಿತ ಭಯೋತ್ಪಾದಕರು ಕಾನೂನಿನಿಂದ ಪಾರಾಗುವುದೆಂದರೆ, ಅವರು ಈ ನೆಲದಲ್ಲಿ ಇನ್ನಷ್ಟು ಬಲವಾಗಿ ಬೇರು ಬಿಡಲಿದ್ದಾರೆ. ನಾವಿಂದು ಚೀನಾ, ಪಾಕಿಸ್ತಾನದ ಗಡಿಯಲ್ಲಿರುವ ಸೇನಾ ಉಲ್ಲಂಘನೆಗಳ ಕುರಿತಂತೆ ಆತಂಕ ವ್ಯಕ್ತ ಪಡಿಸುತ್ತಿದ್ದೇವೆ ಮತ್ತು ಚರ್ಚಿಸುತ್ತಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ದೇಶದ ವಿರುದ್ಧವೇ ಯುದ್ಧ ಹೂಡುತ್ತಿರುವ ಸ್ವದೇಶಿ ಭಯೋತ್ಪಾದಕರನ್ನು ಪರೋಕ್ಷವಾಗಿ ರಕ್ಷಿಸಿಕೊಳ್ಳುವ ಪ್ರಯತ್ನ ಸರಕಾರದ ನೆಲೆಯಲ್ಲೇ ನಡೆಯುತ್ತಿರುವುದರ ಬಗ್ಗೆ ಜಾಣ ಕುರುಡರಾಗಿದ್ದೇವೆ.

ಇಂದು ಪ್ರಜಾಸತ್ತೆಗೆ ಅತೀ ದೊಡ್ಡ ಸವಾಲು ಎದುರಾಗಿರುವುದು ದೇಶದ ಗಡಿಯಿಂದಲ್ಲ, ದೇಶದೊಳಗಿನಿಂದ. ನಮ್ಮ ಬಗಲಲ್ಲಿ ಉಗ್ರರನ್ನು ಸಲಹುತ್ತಾ, ನೆರೆಯ ದೇಶಕ್ಕೆ ಭಯೋತ್ಪಾದನೆಯ ಕುರಿತಂತೆ ಉಪದೇಶಗಳಿಗೆ ನೀಡಿದರೆ ಅದರಿಂದ ಉಭಯದೇಶಕ್ಕೆ ಯಾವ ಪ್ರಯೋಜನವೂ ಸಿಗದು. ಈ ಕಾರಣದಿಂದ ಭಾರತ ಭಯೋತ್ಪಾದಕರ ಕುರಿತಂತೆ ತನ್ನ ದ್ವಂದ್ವ ನಿಲುವುಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಾಗಿದೆ. ಒಬ್ಬ ಭಯೋತ್ಪಾದಕ ಕಾನೂನಿನ ದೌರ್ಬಲ್ಯಗಳನ್ನು ಬಳಸಿ ಹೊರ ಬಂದರೆ, ಅವನ ಮೂಲಕ ಹತ್ತು ಭಯೋತ್ಪಾದಕರು ಹುಟ್ಟಿಕೊಳ್ಳುತ್ತಾರೆ. ಸರಕಾರದ ನೆರಳಲ್ಲೇ ಭಯೋತ್ಪಾದಕರನ್ನು ಸೃಷ್ಟಿಸುವ ಕಾರ್ಯ ನಡೆಯದಿರಲಿ ಎನ್ನುವುದು ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಎಲ್ಲರ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News