ಮಗಳನ್ನು ನೋಡುವ ಮನಸ್ಸಿದೆ, ಆದರೆ ಆಕೆಯ ಮುಖವೇ ನೆನಪಾಗುತ್ತಿಲ್ಲ ! - ಪ್ರಿಯಾ

Update: 2017-08-23 07:58 GMT

ಹತ್ತಿರದ ಫ್ಯಾಕ್ಟರಿಗಳಿಗೆ ಹೋಗುವ ವಾಹನಗಳಿಂದ ಕೆಳಕ್ಕೆ ಉದುರುವ ಗೋಧಿ ಹಾಗೂ ಕಾಳುಗಳನ್ನು ನಾನು ಸಂಗ್ರಹಿಸುತ್ತೇನೆ. ಇದೇ ಪ್ರದೇಶದ ಇತರ ಇಬ್ಬರು ಮಹಿಳೆಯರು ಕೂಡ ಇದೇ ಕಾರ್ಯ ಮಾಡುತ್ತಿದ್ದು ಅವರು ನನಗಿಂತ ಎರಡು ಪಟ್ಟು ಗೋಧಿ ಹಾಗೂ ಕಾಳು ಸಂಗ್ರಹಿಸುತ್ತಾರೆ. ಅಷ್ಟಕ್ಕೂ ಅವರು ನನ್ನಷ್ಟು ಹಿರಿಯ ವಯಸ್ಸಿನವರಲ್ಲ.

ದಿನವೊಂದಕ್ಕೆ ನನಗೆ ಕನಿಷ್ಠ ಮೂರರಿಂದ ನಾಲ್ಕು ಕೆಜಿ ಕಾಳುಗಳನ್ನು  ಸಂಗ್ರಹಿಸಬಹುದು. ನಂತರ ನಾನು ಅದರಿಂದ ಧೂಳನ್ನು ಪ್ರತ್ಯೇಕಿಸಿ ಅದನ್ನು ಸ್ಥಳೀಯ ಅಂಗಡಿಯಲ್ಲಿ ಮಾರುತ್ತೇನೆ. ಪ್ರತಿ ಕೆಜಿಗೆ ನನಗೆ ಏಳು ಟಕಾ ದೊರೆಯುತ್ತದೆ. ದಿನವೊಂದಕ್ಕೆ ನಾನು ಕಷ್ಟ ಪಟ್ಟು 30 ಟಕಾ ಸಂಪಾದಿಸಬಲ್ಲೆ. ಈ ಹಣದಿಂದ ಸ್ವಲ್ಪ ಅಕ್ಕಿ ಮತ್ತು ತರಕಾರಿ ಖರೀದಿಸಿ ಮನೆಗೆ ಹಿಂದಿರುಗಿದ ಮೇಲೆ ಅಡುಗೆ ಮಾಡುತ್ತೇನೆ. ಕಳೆದ 42 ವರ್ಷಗಳಿಂದ ನಾನು ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಸಿಹಿ ತಿಂಡಿಯ ಅಂಗಡಿಯೊಂದರ ಹೊರಗೆ ಪ್ಲಾಸ್ಟಿಕ್ ಶೀಟ್ ಅಡಿಯಲ್ಲಿ ಮಲಗುತ್ತೇನೆ. ಇದು ನನಗಿರುವ ಒಂದೇ ಮನೆ. ಅಂಗಡಿ ಮುಚ್ಚಿದ ಮೇಲೆ ನನಗೆ ಅಲ್ಲಿ ಮಲಗಲು ಆ ಅಂಗಡಿ ಮಾಲಕ ಅನುಮತಿಸಿದ್ದಾನೆ. ಇದಕ್ಕೆ ಬದಲಾಗಿ ನಾನು ಹಣ ಪಡೆಯದೆ ಅವರ ಅಂಗಡಿ ಶುಚಿಗೊಳಿಸುತ್ತೇನೆ.

ಹಲವಾರು ಬಾರಿ ಸ್ಥಳೀಯ ಯೂನಿಯನ್ ಕಚೇರಿಗೆ ತೆರಳಿ ವೃದ್ಧಾಪ್ಯ ವೇತನ ಪಡೆಯಲು ನಾನು ಪ್ರಯತ್ನಿಸಿದ್ದೇನೆ. ಆದರೆ  ನಾನೊಬ್ಬಳು ಬಡ  ವೃದ್ಧೆ ಹಾಗೂ ನನ್ನವರೆಂದು ನನಗ್ಯಾರೂ ಇಲ್ಲದೇ ಇರುವುದರಿಂದ ಯಾರೂ ನನಗೆ ಸಹಾಯ ಮಾಡುತ್ತಿಲ್ಲ. ದಿನವೊಂದಕ್ಕೆ ನಾನು ಒಂದು ಬಾರಿ ಉಣ್ಣುತ್ತೇನೆ. ಮಳೆ ಬಂದಾಗ ನನಗೆ ರಸ್ತೆಯಲ್ಲಿ ಗೋಧಿ ಹಾಗೂ ಕಾಳುಗಳು ದೊರೆಯದು. ಕಳೆದ ಮೂರು ದಿನಗಳಿಂದ ನನಗೆ ಮೈಕೈ ನೋವು ಹಾಗೂ ಜ್ವರವಿದೆ. ಕೆಲಸ ಮಾಡಲು ಸಾಧ್ಯವಾಗಿಲ್ಲ. ನನ್ನನ್ನು ಹುಡುಕಿಕೊಂಡು ಯಾರೂ ಬರಲಿಲ್ಲ !

ನನ್ನ ಗಂಡ 1973ರಲ್ಲಿ ತೀರಿ ಹೋದರು. ಅವರೊಬ್ಬ ಬೋಟ್ ಡ್ರೈವರ್ ಆಗಿದ್ದರು. ನನಗೆ ಒಬ್ಬಳು  ಮಗಳಿದ್ದಳು. ಆಕೆ ಬಾಂಗ್ಲಾದೇಶ ತ್ಯಜಿಸಿ ಭಾರತಕ್ಕೆ ಪತಿಯ ಜತೆ ಹೋಗಿದ್ದಳು. ನಂತರ ನನ್ನನ್ನು ಸಂಪರ್ಕಿಸಿಯೇ ಇಲ್ಲ. ನಾನು ನನ್ನ ಪುತ್ರಿಯನ್ನು ಮಿಸ್  ಮಾಡಿಕೊಳ್ಳುತ್ತೇನೆ ಹಾಗೂ ಆಕೆಯ ಮೊಗವನ್ನೊಮ್ಮೆ ನೋಡಬೇಕೆಂದು ಅನಿಸುತ್ತದೆ. ಆದರೆ ನನಗೆ ಆಕೆಯ ಮುಖ ಕೂಡ ನೆನಪಾಗುತ್ತಿಲ್ಲ.

ನನ್ನಲ್ಲಿ ಯಾರೂ ಮಾತನಾಡುವುದಿಲ್ಲ. ನನಗೆ ಯಾರೂ ಇಲ್ಲ ! ನಾನು ಸತ್ತ ಮೇಲೆ ನನ್ನ ಹೆಣವನ್ನು ದಫನ ಭೂಮಿಗೆ ಯಾರು ಸಾಗಿಸುತ್ತಾರೆಂಬ ಆತಂಕ ನನಗೆ.

- ಪ್ರಿಯಾ, 70

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News