ಈ ಮಗುವಿಗೆ ಗಲ್ಲ ಮತ್ತು ತುಟಿಗಳೇ ಇಲ್ಲ.....!

Update: 2017-08-23 09:29 GMT

ಮಹಿಳೆಗೆ ತಾನು ಗರ್ಭವತಿಯಾಗಿದ್ದೇನೆ ಎನ್ನುವುದು ಗೊತ್ತಾದ ಬಳಿಕ ಆಕೆ ಬರಲಿರುವ ಕಂದ ಹೇಗೆ ಇರಬಹುದು ಎಂಬ ಕಲ್ಪನೆಯಲ್ಲೇ ತೊಡಗಿರುತ್ತಾಳೆ ಮತ್ತು ಅದು ಈ ಭೂಮಿಯಲ್ಲಿ ಅವತರಿಸುವವರೆಗೆ ಅದನ್ನು ಹಾಗೆ ಬೆಳೆಸಬೇಕು, ಹೀಗೆ ಬೆಳೆಸಬೇಕು ಎಂದು ಮನದಲ್ಲಿಯೇ ಯೋಜನೆಗಳನ್ನು ಹಾಕಿಕೊಳ್ಳುತ್ತಿರುತ್ತಾಳೆ. ಈ ಹಂತದಲ್ಲಿ ಆಕೆಯ ಎಲ್ಲ ಕನಸುಗಳು ಸುಂದರವಾಗಿಯೇ ಇರುತ್ತವೆ. ಆದರೆ ಹೆರಿಗೆಯಾದಾಗ ಅವಳ ಈ ಎಲ್ಲ ಕನಸುಗಳು ಮಣ್ಣುಪಾಲಾದರೆ ಹೇಗಿರಬಹುದು? ಇದು ಅಂತಹುದೇ ಒಂದು ಅಪರೂಪದ ಪ್ರಕರಣ. ಇಲ್ಲಿ ಮಗುವಿಗೆ ಜನಿಸಿದಾಗಲೇ ಗಲ್ಲ ಮತ್ತು ತುಟಿಗಳು ಇರಲಿಲ್ಲ ಮತ್ತು ವೈದ್ಯರು ಈ ಹೆಣ್ಣುಶಿಶುವನ್ನು ಹೆತ್ತವರಿಗೆ ಒಪ್ಪಿಸಿದ ಘಳಿಗೆಯಲ್ಲೇ ಅವರು ಇದು ತಮ್ಮ ರಕ್ತ-ಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ಮಗು ಮತ್ತು ಇದು ಹೇಗೆಯೇ ಇದ್ದರೂ ತಮ್ಮೆಲ್ಲ ಪ್ರೀತಿಯನ್ನು ಧಾರೆಯೆರೆ ಯುವುದಾಗಿ ದೃಢನಿರ್ಧಾರ ಮಾಡಿದ್ದರು.

ರಷ್ಯಾದ ಸೈಬೀರಿಯಾ ಪ್ರಾಂತ್ಯದ ಕ್ರಾಸ್ನೊಯಾರ್ಸ್ಕ್‌ ಪ್ರದೇಶದ ನಿವಾಸಿಗಳಾದ ಯೂರಿ ಮತ್ತು ಎಲೆನಾ ದಂಪತಿ ತಮ್ಮ ಮಗುವನ್ನು ಬೆಳೆಸಲು ತುಂಬ ಕಷ್ಟಪಡುತ್ತಿದ್ದಾರೆ. ಎಲೆನಾ(46) ಆಸ್ಪತ್ರೆಯಲ್ಲಿ ಡಾರಿನಾಗೆ ಜನ್ಮ ನೀಡಿದಾಗ ಮಗುವನ್ನು ಆಕೆಗೆ ತೋರಿಸಲು ಅಲ್ಲಿಯ ವೈದ್ಯರು ನಿರಾಕರಿಸಿದ್ದರು. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಗೊಂದಲ ತುಂಬಿ ಕೊಂಡಿತ್ತು. ವೈದ್ಯರು ತಳಮಳಗೊಂಡಿರುವುದನ್ನು ಮತ್ತು ಮಗುವನ್ನು ಒಂದು ಬಟ್ಟೆಯಲ್ಲಿ ಸುತ್ತಿಟ್ಟಿದ್ದನ್ನು ಎಲೆನಾ ಆ ಸ್ಥಿತಿಯಲ್ಲಿಯೂ ಗಮನಿಸಿದ್ದಳು. ಖಂಡಿತವಾಗಿಯೋ ಏನೋ ಪ್ರಮಾದವಾಗಿದೆ ಎನ್ನುವುದು ಆಕೆಗೆ ತಿಳಿದುಹೋಗಿತ್ತು.

ಒಂದು ಬಾರಿ ಮಗುವಿನ ಮಗುವನ್ನು ತನಗೆ ತೋರಿಸಿ ಎಂದು ಎಲೆನಾ ವೈದ್ಯರನ್ನು ಇನ್ನಿಲ್ಲದಂತೆ ಬೇಡಿಕೊಂಡಿದ್ದಳು. ಆದರೆ ಗಂಟೆಗಟ್ಟಲೆ ಆಕೆಗೆ ಆ ಅವಕಾಶವನ್ನು ನಿರಾಕರಿಸಲಾಗಿತ್ತು. ವೈದ್ಯರು ಏನು ಮಾಡುವುದೋ ಎಂದು ಗೊತ್ತಾಗದೆ ಗೊಂದಲ ದಲ್ಲಿದ್ದರು. ಕೆಲವು ಗಂಟೆಗಳ ಬಳಿಕ ಕೊನೆಗೂ ಮಗುವನ್ನು ಎಲೆನಾಗೆ ತೋರಿಸಲಾಗಿತ್ತು. ಮಗುವಿಗೆ ಗಲ್ಲ ಮತ್ತು ತುಟಿಗಳೇ ಇರಲಿಲ್ಲ, ಇಡೀ ಮುಖ ರಕ್ತಮಯವಾಗಿತ್ತು. ತಾನು ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಹಂಬಲಿಸಿದ್ದ ಮಗುವನ್ನು ಕಂಡ ತಕ್ಷಣ ಎಲೆನಾ ಪ್ರಜ್ಞಾಶೂನ್ಯಳಾಗಿದ್ದಳು.

ಎಲೆನಾಗೆ ಪ್ರಜ್ಞೆ ಮರುಕಳಿಸಿದಾಗ ಪತಿ ಯೂರಿ ಪಕ್ಕದಲ್ಲಿಯೇ ಇದ್ದ ಮತ್ತು ತಮ್ಮ ಕರುಳಕುಡಿಯನ್ನು ಎದೆಗವಚಿಕೊಂಡಿದ್ದ. ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟುಹೋಗಿ ಮತ್ತು ಅವಳನ್ನು ಮರೆತುಬಿಡಿ ಎಂದು ವೈದ್ಯರು ದಂಪತಿಯನ್ನು ಇನ್ನಿಲ್ಲದಂತೆ ಒತ್ತಾಯಿಸಿ ದ್ದರು.

ಆದರೆ ಅದಾಗಲೇ ದೃಢನಿರ್ಧಾರವನ್ನು ಮಾಡಿದ್ದ ಯೂರಿ-ಎಲೆನಾ ವೈದ್ಯರ ಒತ್ತಾಯ ವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಎಲೆನಾ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಳು. ಅಂದಿನಿಂದ ಪುಟ್ಟ ಡಾರಿನಾಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ, ಇನ್ನೋ ಎಷ್ಟೋ ಬಾರಿ ಆ ಮಗು ಶಸ್ತ್ರಚಿಕಿತ್ಸೆಗಳ ಯಮಯಾತನೆಯನ್ನು ಅನುಭವಿಸಬೇಕಿದೆ. ಡಾರಿನಾ ಇನ್ನೂ ಎಳೆಯ ಮಗುವಾಗಿರುವುದರಿಂದ ವೈದ್ಯರೂ ಶಸ್ತ್ರಚಿಕಿತ್ಸೆ ವೇಳೆ ಅತ್ಯಂತ ಕಾಳಜಿಯನ್ನು ವಹಿಸುತ್ತಿದ್ದಾರೆ.

ಮಗುವಿನ ಅಪರೂಪದ ವೈಕಲ್ಯದಿಂದಾಗಿ ಸಮಾಜದಲ್ಲಿ ಅವರು ಅನುಭವಿಸಿದ ತಾರತಮ್ಯ ಮತ್ತು ಅವಹೇಳನ ಅಷ್ಟಿಷ್ಟಲ್ಲ. ಕುಟುಂಬ ಸದಸ್ಯರ, ಬಂಧುಗಳ ತಿರಸ್ಕಾರವನ್ನು ಸಹಿಸದೇ ದಂಪತಿ ಅವರಿಂದ ದೂರವಾಗಿದ್ದಾರೆ. ಮಗಳನ್ನು ಅತಿಯಾಗಿ ಪ್ರೀತಿಸುತ್ತಿರುವ ಅವರು ಎಲ್ಲಿಯೇ ಹೊರಗೆ ಹೋಗುವುದಿದ್ದರೂ ಆಕೆಯನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಮಗುವಿನ ಕುರೂಪವನ್ನು ಕಂಡು ಜಿಗುಪ್ಸೆಗೊಂಡ ಜನ ಅದಕ್ಕೆ ಒಂದು ಮಾಸ್ಕ್‌ನ್ನು ತೊಡಿಸಿ ಎಂದು ಪುಕ್ಕಟೆ ಸಲಹೆ ನೀಡುತ್ತಿರುತ್ತಾರೆ. ಆಗೆಲ್ಲ ನಮ್ಮ ಮಗು ಇರುವುದೇ ಹಾಗೆ, ನೀವದನ್ನು ನೋಡಬೇಡಿ ಎಂದು ದಂಪತಿ ಅಂತಹವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಡಾರಿನಾಳನ್ನು ನೋಡಿ ಇತರ ಮಕ್ಕಳು ಹೆದರಿಕೊಳ್ಳುತ್ತಾರೆ ಎಂಬ ನೆಪವೊಡ್ಡಿ ಕಿಂಡರ್ ಗಾರ್ಟ್‌ನ್ ಶಾಲೆಗಳೂ ಅವಳನ್ನು ಸೇರಿಸಿಕೊಳ್ಳುತ್ತಿಲ್ಲ. ಹೀಗಾಗಿ ನಾಲ್ಕು ವರ್ಷಗಳಾಗಿದ್ದರೂ ಡಾರಿನಾಗೆ ಶಾಲೆಯ ಭಾಗ್ಯವೊದಗಿಲ್ಲ.

ಡಾರಿನಾಗೆ ನಿರಂತರವಾಗಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಲೇ ಇವೆ. ತಮ್ಮ ಮಗು ತಮಗೆ ಪ್ರೀತಿ ನೀಡುತ್ತಿದೆ, ಆಕೆಯೂ ಇತರ ಮಕ್ಕಳಂತೆಯೇ. ಆಕೆಯನ್ನು ತಾವು ಸಮಾಜದ ಕಣ್ಣಿನಿಂದ ಬಚ್ಚಿಡಬೇಕಾಗಿಲ್ಲ ಎನ್ನುತ್ತಾರೆ ಯೂರಿ ದಂಪತಿ.

ಸಾಮಾಜಿಕ ಮಾಧ್ಯಮಗಳಲ್ಲಿ ಡಾರಿನಾಗೆ ಶುಭಹಾರೈಕೆಗಳ, ಪ್ರೀತಿಯ ಮಹಾಪೂರವೇ ಹರಿದುಬರುತ್ತಿದೆ. ಆಕೆಯ ಶಸ್ತ್ರಚಿಕಿತ್ಸೆಗಳಿಗಾಗಿ ಹಣವನ್ನು ಒಟ್ಟುಗೂಡಿಸುವ ಅಭಿ ಯಾನವೂ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಡಾರಿನಾ ಬೇಗನೇ ಎಲ್ಲ ಮಕ್ಕಳಂತಾಗಲಿ ಎಂದು ಹಾರೈಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News