ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ: ತನಿಖಾ ವರದಿ ಸಲ್ಲಿಸಿದ ನ್ಯಾ.ಕೆಂಪಣ್ಣ ಆಯೋಗ
ಬೆಂಗಳೂರು, ಆ.23: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡಲು ರಚಿಸಲಾಗಿದ್ದ ನ್ಯಾ.ಎಚ್.ಎಸ್.ಕೆಂಪಣ್ಣ ನೇತೃತ್ವದ ಆಯೋಗವು ರಾಜ್ಯ ಸರಕಾರಕ್ಕೆ ತನ್ನ ವರದಿಯನ್ನು ಹಸ್ತಾಂತರಿಸಿದೆ.
ಬುಧವಾರ ನಗರದಲ್ಲಿ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಸುಭಾಷ್ ಚಂದ್ರ ಕುಂಟಿಯಾರನ್ನು ಭೇಟಿ ಮಾಡಿದ ನ್ಯಾ.ಕೆಂಪಣ್ಣ, ತನಿಖಾ ವರದಿಯನ್ನು ಅವರಿಗೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರವು ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವಿಚಾರಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ, ಆಯೋಗಕ್ಕೆ ಬಂದ ದೂರುಗಳ ಬಗ್ಗೆ ಸಮಗ್ರವಾಗಿ ವಿಚಾರಣೆ ನಡೆಸಿ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ನ್ಯಾ.ಕೆಂಪಣ್ಣ ಹೇಳಿದರು.
ನನ್ನ ಕೆಲಸವನ್ನು ಇಂದು ಮುಗಿಸಿದ್ದೇನೆ. ವರದಿಯ ಬಗ್ಗೆ ಮುಂದಿನ ತೀರ್ಮಾನವನ್ನು ಸರಕಾರ ಕೈಗೊಳ್ಳಲಿದೆ. ಆರು ತಿಂಗಳಲ್ಲಿ ತನಿಖಾ ವರದಿಯನ್ನು ನೀಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಸಮಗ್ರವಾಗಿ ತನಿಖೆ ನಡೆಸಬೇಕಾಗಿದ್ದರಿಂದ ಹೆಚ್ಚಿನ ಕಾಲಾವಕಾಶ ಬೇಕಾಯಿತು ಎಂದು ಅವರು ಹೇಳಿದರು.
ತನಿಖಾ ವರದಿಯು ರಾಜ್ಯ ಸರಕಾರದ ಆಸ್ತಿ. ಅದರಲ್ಲಿರುವ ಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ವಿಚಾರಣೆ ಸಂದರ್ಭದಲ್ಲಿ ಆಯೋಗವು 85 ಅರ್ಜಿಗಳನ್ನು ಸ್ವೀಕರಿಸಿ, ಅದರಲ್ಲಿ 43ನ್ನು ವಿಚಾರಣೆಗೆ ಅಂಗೀಕರಿಸಿತ್ತು ಎಂದು ಕೆಂಪಣ್ಣ ತಿಳಿಸಿದರು.
ಸಾರ್ವಜನಿಕರ ಪರವಾಗಿ ಹಿರಿಯ ನ್ಯಾಯವಾದಿ ದೊರೈರಾಜು ಆಯೋಗದ ಎದುರು ವಾದ ಮಂಡಿಸಿದ್ದರು. ಹಲವಾರು ದಾಖಲೆಗಳನ್ನು ಮುಂದಿಟ್ಟು ಹಲವು ಅವ್ಯವಹಾರಗಳನ್ನು ಅವರು ಆಯೋಗದ ಗಮನಕ್ಕೆ ತಂದಿದ್ದರು ಎಂದು ಕೆಂಪಣ್ಣ ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್, ರಾಕೇಶ್‌ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗೆ ಕ್ಲೀನ್‌ಚಿಟ್ ?
ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ನ್ಯಾ.ಕೆಂಪಣ್ಣ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಿದೆ ಎಂದು ತಿಳಿದು ಬಂದಿದೆ. ಆದರೆ, ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಇದರಲ್ಲಿ ಕರ್ತವ್ಯ ಲೋಪವೆಸಗಿರುವುದನ್ನು ಆಯೋಗವು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.