ಪ್ರತೀ ಶಾಲೆಯ ಅಂಗಳದಲ್ಲಿಯೇ ತಾರಾ ಮಂಡಲ ವೀಕ್ಷಣೆಗೆ ರಾಜ್ಯ ಸರಕಾರ ಸಿದ್ಧತೆ
ಬೆಂಗಳೂರು, ಆ.23: ಸುಮಾರು 10 ಅಡಿ ಸುತ್ತಳತೆಯಲ್ಲಿ ಗೊಮ್ಮಟದ ಮಾದರಿಯಲ್ಲಿರುವ ಸಂಚಾರಿ ಡಿಜಿಟಲ್ ತಾರಾಲಯವು ಮುಂದಿನ ಆರು ತಿಂಗಳಲ್ಲಿ ರಾಜ್ಯದ ಪ್ರತೀ ಶಾಲೆಗೂ ಸಂಚರಿಸುವ ಮೂಲಕ ಶಾಲೆಯ ಅಂಗಳದಲ್ಲಿಯೇ ತಾರಾ ಮಂಡಲವನ್ನು ವೀಕ್ಷಿಸಲು ಅನುಕೂಲವಾಗುವಂತೆ ರಾಜ್ಯ ಸರಕಾರ ಕಾರ್ಯಕ್ರಮ ರೂಪಿಸಿದೆ.
ಬುಧವಾರ ಸಂಚಾರಿ ಡಿಜಿಟಲ್ ತಾರಾಲಯವನ್ನು ಪ್ರಾಯೋಗಿಕವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರದರ್ಶಿಸಲಾಯಿತು. ನಗರದ ವಿವಿಧ ಶಾಲೆಗಳಿಂದ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ಸಂಚಾರಿ ಡಿಜಿಟಲ್ ತಾರಾಲಯದಲ್ಲಿ ಆಕಾಶಕಾಯ, ಮಾನವ ನಿರ್ಮಿತ ಉಪಗ್ರಹಗಳನ್ನು ಆಶ್ಚರ್ಯಚಕಿತದಿಂದ ನೋಡಿ ಸಂತಸ ವ್ಯಕ್ತಪಡಿಸಿದರು.
ಮುಂದಿನ ವಾರದಿಂದಲೇ ಡಿಜಿಟಲ್ ಸಂಚಾರಿ ತಾರಾಲಯ ಶಾಲೆಯಿಂದ ಶಾಲೆಗೆ ಸಂಚರಿಸಲಿದೆ. ಈ ತಾರಾಲಯದ ಮೂಲಕ ಬೆಂಗಳೂರಿನ ಜವಾಹರ್‌ಲಾಲ್ ನೆಹರೂ ತಾರಾಲಯದ ಮಾದರಿಯಲ್ಲೇ ಆಕಾಶಕಾಯಗಳ ಕುರಿತು ಚಿತ್ರ ಹಾಗೂ ಮಾಹಿತಿಯನ್ನು ಪ್ರದರ್ಶಿಸಲಾಗುವುದು.
ಪ್ರತೀ ಶಾಲೆಯಲ್ಲಿ ಒಂದು ಕೃತಕ ಹಾಗೂ ತಾತ್ಕಾಲಿಕ ಗೋಳಾಕಾರದ ಗೊಮ್ಮಟವನ್ನು ನಿರ್ಮಿಸಲಾಗುತ್ತದೆ. ಆ ಗೊಮ್ಮಟದಲ್ಲಿ ಸುಮಾರು 20ರಿಂದ 25ವಿದ್ಯಾರ್ಥಿಗಳು ಕುಳಿತುಕೊಳ್ಳುವಂತಹ ಅವಕಾಶವಿರುತ್ತದೆ. ನಂತರ ಅತ್ಯಾಧುನಿಕ ಪ್ರೊಜೆಕ್ಟರ್ ಸಹಾಯದಿಂದ ಗೋಳಾಕಾರದ ಗೊಮ್ಮಟದಲ್ಲಿ ಅದ್ಭುತವಾದ ಕಾಲ್ಪನಿಕ ಆಕಾಶವನ್ನು ಸೃಷ್ಟಿಸಲಾಗುತ್ತದೆ.
ಈ ಸಂಚಾರಿ ತಾರಾಲಯದಲ್ಲಿ ಪ್ರಮುಖವಾಗಿ 8ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಕ್ಕನುಗುಣವಾಗಿ ‘ನೋಡಿ ತಿಳಿ’ ಪರಿಕಲ್ಪನೆಯಡಿ ಪ್ರದರ್ಶನಗಳನ್ನು ರೂಪಿಸಲಾಗಿದ್ದು, ನೈಜತೆಯ ರೂಪದಲ್ಲಿ ವಿಶೇಷ ಅನುಭವವನ್ನು ಮಕ್ಕಳಲ್ಲಿ ಉಂಟು ಮಾಡಲಿದೆ. ವಿದ್ಯಾರ್ಥಿಗಳಿಗೆ ತೋರಿಸಿದ ನಂತರ ಮುಂದಿನ ಮಾರ್ಚ್ 2018ರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವವರೆಗೆ ಈ ತಾರಾಲಯಗಳನ್ನು ಆಯಾ ಜಿಲ್ಲೆಗಳ ಜನಸಾಮಾನ್ಯರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.