ತನ್ನಲ್ಲಿ ಹೆಚ್ಚಿನ ಆತಂಕ, ದಿಗಿಲು ಹುಟ್ಟಿಸುತ್ತಿದೆ: ಮುಖ್ಯ ನ್ಯಾ. ಎಸ್.ಕೆ.ಮುಖರ್ಜಿ
ಬೆಂಗಳೂರು, ಆ.23: ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಪ್ರತಿದಿನ ಕಡಿಮೆಯಾಗುತ್ತಿರುವುದರಿಂದ ತನ್ನಲ್ಲಿ ಹೆಚ್ಚಿನ ಆತಂಕ ಮತ್ತು ದಿಗಿಲು ಹುಟ್ಟಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಬುಧವಾರ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಹೈಕೋರ್ಟ್‌ನಲ್ಲಿ ಸೇವೆಯಿಂದ ನಿವೃತ್ತರಾಗುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಪ್ರತಿದಿನ ನ್ಯಾಯಾಮೂರ್ತಿಗಳ ಪ್ರಮಾಣ ಕುಸಿಯುತ್ತಿದೆ. ಆದರೆ, ನೂತನ ನ್ಯಾಯಮೂರ್ತಿಗಳ ಮಾತ್ರ ನೇಮಕವಾಗುತ್ತಿಲ್ಲ. ಇದೊಂದು ಆತಂಕಕಾರಿ ವಿಷಯವಾಗಿದ್ದು, ನನ್ನಲ್ಲಿ ದಿಗಿಲು ಹುಟ್ಟಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಪ್ರಾಪ್ತರು ಪಾಲ್ಗೊಳ್ಳುವ ಹೀನ ಅಪರಾಧ ಕೃತ್ಯಗಳ ವಿಚಾರಣೆಯ ಮೇಲ್ವಿಚಾರಣೆ ವಹಿಸುವ ಮಕ್ಕಳ ನ್ಯಾಯ ಮಂಡಳಿ ಸಮಿತಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರು ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಹಾಗೆಯೇ, ನ್ಯಾಯಮೂರ್ತಿ ಹಿಂಚಿಗೇರಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಸನ್ಮಾನ ಸ್ವೀಕರಿಸಿದ ಮಾತನಾಡಿದ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರು, ಹಸಿದವರ ಹೊಟ್ಟೆ ತಣಿಸಲು ವಕೀಲರು ಕಾನೂನು ಎಂಬ ಅಸ್ತ್ರವನ್ನು ಸೂಕ್ತವಾಗಿ ಬಳಸಬೇಕು. ಕಿರಿಯ ವಕೀಲರು ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ದುಡಿಯುವ ಮೂಲಕ ವಕೀಲಿ ವೃತ್ತಿಯ ಘನತೆ-ಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು, ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಪ್ರವೀಣ್ ಗೌಡ ಮತ್ತು ಉಪಾಧ್ಯಕ್ಷ ರಾಜು ಉಪಸ್ಥಿತರಿದ್ದರು.
ನಾನು ವಕೀಲನಾಗಿದ್ದಾಗ ಪ್ರಕರಣವೊಂದರಲ್ಲಿ ನನ್ನ ಕಕ್ಷಿದಾರ ಕಡು ಬಡವನಾಗಿದ್ದ. ನನಗೆ ಫೀಸು ನೀಡಲು ಆತನಲ್ಲಿ ಹಣವಿರಲಿಲ್ಲ. ಇದರಿಂದ ಗೋಣಿ ಚೀಲದಲ್ಲಿ ತನ್ನ ಮನೆಯಲ್ಲಿದ್ದ ದೊಡ್ಡ ಪಾತ್ರೆಯೊಂದನ್ನು ತುಂಬಿಕೊಂಡು ಬಂದು ನನಗೆ ನೀಡಿದ್ದರು. ಈ ಪಾತ್ರೆ ಏಕೆ ನೀಡುತ್ತೀರಿ ಎಂಬ ನನ್ನ ಪ್ರಶ್ನೆಗೆ ಉತ್ತರಿಸಿದ ಆತ, ನಿಮಗೆ ಫೀಸು ನೀಡಲು ನನ್ನಲ್ಲಿ ಹಣವಿಲ್ಲ. ಪಾತ್ರೆ ಅಡಮಾನವಿಟ್ಟರೆ ಮತ್ತೆ ಅದನ್ನು ಬಿಡಿಸಿಕೊಳ್ಳಲು ಹಣ ಜಮಾ ಮಾಡಲು ಕಷ್ಟವಾದೀತು ಎಂಬ ಕಾರಣಕ್ಕೆ ನೇರವಾಗಿ ಪಾತ್ರೆ ನಿಮಗೆ ಕೊಡಲು ತಂದಿದ್ದೇನೆ ಎಂದರು. ಇದರಿಂದ ಒಂದು ಕ್ಷಣ ನಾನು ವಿಚಲಿತನಾದೆ ಮತ್ತು ಆ ಬಡ ಕಕ್ಷಿದಾರನ ಪ್ರಾಮಾಣಿಕತೆ ಕಂಡು ಅವರ ಮೇಲೆ ನನಗೆ ಗೌರವ ಹೆಚ್ಚಾಯಿತು. ನನಗಿಂತ ಹಿರಿಯನಾಗಿದ್ದರಿಂದ ಆತನ ಕಾಲಿಗೆ ನಾನು ನಮಸ್ಕರಿಸಿದೆ.-ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ .