×
Ad

ಆರ್‌ಟಿಐ ಕಾರ್ಯಕರ್ತರ ಭದ್ರತೆ, ರಕ್ಷಣೆಗೆ ಪ್ರತ್ಯೇಕ ನೀತಿ ರಚಿಸಲಾಗಿದೆ: ಹೈಕೋರ್ಟ್‌ಗೆ ಸರಕಾರ ಹೇಳಿಕೆ

Update: 2017-08-23 22:53 IST

ಬೆಂಗಳೂರು, ಆ.23: ರಾಜ್ಯದಲ್ಲಿ ಯೋಗ್ಯ ಆರ್‌ಟಿಐ ಕಾರ್ಯಕರ್ತರ ಅಥವಾ ಸಮಾಜದ ಸ್ವಾಸ್ಥ್ಯ ನಾಶದ ಬಗ್ಗೆ ಎಚ್ಚರಿಕೆ ನೀಡುವವರ ಭದ್ರತೆ ಹಾಗೂ ರಕ್ಷಣೆಗೆ ಪ್ರತ್ಯೇಕ ನೀತಿ ರಚನೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಯೋಗ್ಯ ಆರ್‌ಟಿಐ ಕಾರ್ಯಕರ್ತರ ರಕ್ಷಣೆಗೆ ನೀತಿ ರಚಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಹಾಗೂ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರಕಾರಿ ವಕೀಲರು ಪ್ರಮಾಣ ಪತ್ರ ಸಲ್ಲಿಸಿ ಈ ಮಾಹಿತಿ ನೀಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿದೆ. ರಾಜ್ಯದಲ್ಲಿ ಯೋಗ್ಯ ಆರ್‌ಟಿಐ ಕಾರ್ಯಕರ್ತರ ರಕ್ಷಣೆಗೆ ನೀತಿ ರೂಪಿಸುವಂತೆ ಹೈಕೋರ್ಟ್ 2017ರ ಫೆ.13ರಂದು ನೀಡಿದ ಆದೇಶವನ್ನು ಸರಕಾರ ಪಾಲಿಸಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ಕಳೆದ ವಿಚಾರಣೆ ವೇಳೆ ವಾದ ಮಂಡಿಸಿದ್ದ ಸರಕಾರಿ ವಕೀಲರು, ಡಿಜಿ-ಐಜಿಪಿ ಅವರ ಅಭಿಪ್ರಾಯ ಒಳಗೊಂಡಂತೆ ಹರಿಯಾಣ ರಾಜ್ಯದ ಮಾದರಿಯಲ್ಲಿ ಕರಡು ನೀತಿ ರೂಪಿಸಲಾಗಿತ್ತು. ಕರಡು ನೀತಿ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ. ಇದು ನೀತಿ ವಿಚಾರವಾದ್ದರಿಂದ ಅನುಮೋದನೆಗೆ ಕಡತವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ. ಮುಖ್ಯಮಂತ್ರಿಗಳು ಕರಡು ನೀತಿಗೆ ಅನುಮೋದನೆ ನೀಡಿದರೆ, ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದರು.

ಅದರಂತೆ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಸರಕಾರಿ ವಕೀಲರು ವಾದಿಸಿ, ರಾಜ್ಯದಲ್ಲಿ ಯೋಗ್ಯ ಆರ್‌ಟಿಐ ಕಾರ್ಯಕರ್ತರ ಅಥವಾ ಸಮಾಜದ ಸ್ವಾಸ್ಥ್ಯ ನಾಶದ ಬಗ್ಗೆ ಎಚ್ಚರಿಕೆ ನೀಡುವವರ ಭದ್ರತೆ ಹಾಗೂ ರಕ್ಷಣೆಗೆ ಪ್ರತ್ಯೇಕ ನೀತಿ ರಚನೆ ಮಾಡಿ ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News