×
Ad

ಶಾಂತಿಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೂಚನೆ

Update: 2017-08-23 22:57 IST

ಬೆಂಗಳೂರು, ಆ.23: ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬದ ಹೆಸರಿನಲ್ಲಿ ಕೋಮು ಸೌಹಾರ್ದತೆ ಕದಡದೆ, ಅಣ್ಣ-ತಮ್ಮಂದಿರ ರೀತಿಯಲ್ಲಿ ಹಬ್ಬ ಆಚರಣೆ ಮಾಡಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.

ಬುಧವಾರ ನಗರದ ಪುರಭವನದಲ್ಲಿ ಬೆಂ.ನಗರ ಪೊಲೀಸ್ ಹಾಗೂ ಬಿಬಿಎಂಪಿ ವತಿಯಿಂದ ಹಮ್ಮಿಕೊಂಡಿದ್ದ ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬಗಳ ಸಂಬಂಧ ಶಾಂತಿ ಪಾಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬಗಳು ಒಂದೇ ಸಮಯಕ್ಕೆ ಆಚರಣೆಯಾಗುತ್ತಿದೆ. ಈ ವೇಳೆ ನಗರದಲ್ಲಿ ಯಾವುದೇ ಆತಂಕದ, ಭಯದ ವಾತಾವರಣ ನಿರ್ಮಾಣವಾಗದಂತೆ ಸಾರ್ವಜನಿಕರು ಎಚ್ಚರವಾಗಿರಬೇಕು. ಕಾನೂನನ್ನು ಗೌರವಿಸಬೇಕು. ಒಂದು ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್‌ಪ್ರಸಾದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಗೌರಿಗಣೇಶ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗಣೇಶ ಹಬ್ಬದ ಕ್ರಮಗಳು: ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿಡುವ ಬಗ್ಗೆ ಅನುಮತಿ ಪಡೆಯಬೇಕು. ಮೂರ್ತಿಗಳ ಜವಾಬ್ದಾರಿ ವಹಿಸುವವರು ಸಂಬಂಧಪಟ್ಟ ಠಾಣೆಗಳಿಗೆ ಅಗತ್ಯ ಮಾಹಿತಿ ನೀಡಬೇಕು. ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಗಣೇಶ ಮೂರ್ತಿಗಳನ್ನು ಇಡುವುದನ್ನು ನಿಷೇಧಿಸಲಾಗಿದೆ.

ಪಾಲಿಕೆ, ಬೆಸ್ಕಾಂ, ಅಗ್ನಿಶಾಮಕ ಹಾಗೂ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ನಿರಾಪೇಕ್ಷಣಾ ಪತ್ರ ಪಡೆಯಬೇಕು. ಧ್ವನಿವರ್ಧಕ ಬಳಕೆಯನ್ನು ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೂ ನಿಷೇಧಿಸಲಾಗಿದೆ. ವಿಸರ್ಜನೆ ವೇಳೆ ಪಾಲಿಕೆ ನಿಗದಿ ಪಡಿಸಿರುವ ಸಮಯವನ್ನು ಪಾಲಿಸಬೇಕು. ಹಾಗೂ ಪೂಜಾ ಸಾಮಗ್ರಿ ಹಾಗೂ ಇತರೆ ಕಸವನ್ನು ನೀರಿಗೆ ಹಾಕದೇ, ಪ್ರತ್ಯೇಕ ವೀಲೇವಾರಿ ಮಾಡಲು ಅನುಕೂಲವಾಗುವಂತೆ ಹಾಕಬೇಕು.

ಬಕ್ರೀದ್ ಹಬ್ಬದ ಕ್ರಮಗಳು: ಬಕ್ರೀದ್ ಹಬ್ಬದ ಮುಂಚಿತವಾಗಿ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ ಮತ್ತು ಎಲ್ಲ ಕೋಮಿನ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಬೇಕು. ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುವುದು, ಡ್ರಾಗ್ ರೇಸಿಂಗ್ ಸೇರಿ ಇನ್ನಿತರೆ ಸಂಚಾರಿ ರಸ್ತೆ ನಿಯಮ ಉಲ್ಲಂಘನೆಯಾಗಬಾರದು. ಅದೇ ರೀತಿ, ಬಕ್ರೀದ್ ಹಬ್ಬದ ಆಚರಣೆಯಲ್ಲಿ ಮಾಂಸ ಕಡಿದ ನಂತರ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಕ್ಕಾಗಿ ಪಾಲಿಕೆ ವಾಹನ ವ್ಯವಸ್ಥೆ ಕಲ್ಪಿಸಿದೆ. ಇದಕ್ಕೆ ಕಡ್ಡಾಯವಾಗಿ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯಬಾರದು. ಈ ವಾಹನ ಸಂಚರಿಸುವ ಸಮಯ ನೀಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು.

 ಸಭೆಯಲ್ಲಿ ಪಶ್ಚಿಮ ವಲಯ ಅಪರ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಸಂಚಾರಿ ವಿಭಾಗದ ಅಪರ ಆಯುಕ್ತ ಆ.ಇತೇಂದ್ರ, ಬೆಸ್ಕಾಂನಿಂದ ರವೆುೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News