×
Ad

ಬಹುಭಾಷಾ ನಟಿ ಪ್ರಿಯಾಮಣಿ ಸರಳ ವಿವಾಹ

Update: 2017-08-23 23:08 IST

ಬೆಂಗಳೂರು, ಆ.23: ಬಹುಭಾಷಾ ನಟಿ ಪ್ರಿಯಾಮಣಿ ಮುಂಬೈ ಮೂಲದ ಉದ್ಯಮಿ ಮುಸ್ತಫಾ ಇಸ್ಮಾಯೀಲ್ ರಾಜ್ ಅವರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳವಾಗಿ ವಿವಾಹವಾದರು.

ಗೆಳೆಯ, ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಜುಲೈ ತಿಂಗಳಲ್ಲೇ ಜಯನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಬುಧವಾರ ಕಚೇರಿಯಲ್ಲಿ ಹಾಜರಾಗಿ ಅಧಿಕಾರಿಗಳ ಸಮ್ಮುಖದಲ್ಲಿಯೇ ನೋಂದಣಿಗೆ ಸಹಿ ಹಾಕಿ, ಹೂವಿನ ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ಮದುವೆ ಮಾಡಿಕೊಂಡರು.

ಬನಶಂಕರಿಯಲ್ಲಿರುವ ಪ್ರಿಯಾಮಣಿ ನಿವಾಸಕ್ಕೆ ಎರಡು ಕುಟುಂಬದ ಸದಸ್ಯರು, ಆಪ್ತರು, ಚಿತ್ರರಂಗದ ಗಣ್ಯರು ಭೇಟಿ ನೀಡಿ ಶುಭ ಕೋರಿದರು. ಗುರುವಾರ ಸಂಜೆ 7 ಕ್ಕೆ ಜೆಪಿ ನಗರದಲ್ಲಿರುವ ಇಲಾನ್ ಕನ್ವೆನ್‌ಷನ್ ಹಾಲ್‌ನಲ್ಲಿ ಆರತಕ್ಷತೆ ಸಮಾರಂಭ ಆಯೋಜಿಸಲಾಗಿದ್ದು, ಕೆಲವೇ ಕೆಲವು ಗಣ್ಯರು, ಸಿನೆಮಾ ಆಪ್ತರು ಹಾಗೂ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿದೆ.

ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ಪ್ರಿಯಾಮಣಿ ಕನ್ನಡದ ಬಹುತೇಕ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡಿದ್ದರು. ಕನ್ನಡದಲ್ಲಿ ನಟಿಸುವುದಕ್ಕೂ ಮುನ್ನ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News