ಮಾರಕಾಸಗಳಿಂದ ಕೊಚ್ಚಿ ಯುವಕನ ಕೊಲೆ
ನಾಗಮಂಗಲ, ಆ.23: ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೋರ್ವನನ್ನು ಕಾರಿನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ತಾಲೂಕಿನ ಶ್ರೀರಂಗಪಟ್ಟಣ ಜೇವರ್ಗಿ ಹೆದ್ದಾರಿಯ ಅಂಚೆಚಿಟ್ಟನಹಳ್ಳಿ ಗೇಟ್ ಬಳಿ ಮಾರಕಾಸಗಳಿಂದ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಹಾಡಹಗಲೆ ನಡೆದಿದೆ.
ಬೆಂಗಳೂರು ರಾಜಾಜಿನಗರ ನಿವಾಸಿ ಕುಮಾರ ಎಂಬವರ ಪುತ್ರ ಭರತ್(22) ಕೊಲೆಯಾದ ಯುವಕ. ಆತನ ಗೆಳೆಯ ಮುನಿರಾಜು ಗಂಭೀರವಾಗಿ ಗಾಯಗೊಂಡಿದ್ದಾನೆ. ಭರತ್, ಆತನ ಸ್ನೇಹಿತರಾದ ಮುನಿರಾಜು, ಮಂಜುನಾಥ್, ಹರ್ಷಿತ್ ಬೆಂಗಳೂರಿನಿಂದ ನಾಗಮಂಗಲಕ್ಕೆ ಬೈಕ್ ಮತ್ತು ಸ್ಕೂಟರ್‌ನಲ್ಲಿ ಬರುತ್ತಿದ್ದಾಗ, ಅವರನ್ನು ಎರಡು ಕಾರುಗಳಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಅಂಚೆಚಿಟ್ಟನಹಳ್ಳಿ ಗೇಟ್ ಬಳಿ ಭರತ್‌ನನ್ನು ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಸ್ನೇಹಿತ ಮುನಿರಾಜುಗೂ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ದುಷ್ಕರ್ಮಿಗಳು ಕಾರನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಮತ್ತೊಂದು ಸ್ಕೂಟರ್‌ನಲ್ಲಿದ್ದ ಮಂಜುನಾಥ್, ಹರ್ಷಿತ್‌ಗೆ ಯಾವುದೆ ಅಪಾಯವಾಗಿಲ್ಲ. ಆದರೆ, ಅವರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.