×
Ad

ಬ್ಯಾಂಕ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಆಗ್ರಹ: ಸಿಎಂಗೆ ಮನವಿ

Update: 2017-08-23 23:39 IST

ಬೆಂಗಳೂರು, ಆ.23: ಸ್ಥಳೀಯ ಗ್ರಾಮೀಣ ಬ್ಯಾಂಕ್‌ಗಳ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ಕಲ್ಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರಕಾರದ ಅಡಿಯಲ್ಲಿರುವ ಐಬಿಪಿಎಸ್ ವತಿಯಿಂದ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ 9 ಸಾವಿರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ, ಈ ನೇಮಕಾತಿ ವೇಳೆ 1 ರಿಂದ 10 ನೆ ತರಗತಿಯ ವರೆಗೆ ಕನ್ನಡವನ್ನು ಕನಿಷ್ಠ ಒಂದು ಭಾಷೆಯನ್ನಾಗಿ ಓದಿದ ಅಭ್ಯರ್ಥಿಗಳಿಗೆ ಮೊದಲ ಪ್ರಾತಿನಿಧ್ಯ ಕೊಡಬೇಕು. ಸಂದರ್ಶನದಲ್ಲಿ ಕನ್ನಡ ಓದಲು, ಬರೆಯಲು, ಮಾತನಾಡಲು ಬರುವವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಐಬಿಪಿಎಸ್ ಅಸ್ತಿತ್ವಕ್ಕೆ ಬಂದ ನಂತರ ನೇಮಕಾತಿಗಳಲ್ಲಿ ಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಪ್ರತಿವರ್ಷ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ನೇಮಕಾತಿ ನೀತಿಯಿಂದ ರಾಜ್ಯಗಳ ಸ್ಥಳೀಯ ಜನಾಂಗ, ಸಂಸ್ಕೃತಿಗಳ ಮೇಲಿನ ನೇರ ಪ್ರಹಾರವಾಗಿದೆ. ಹೀಗಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬ್ಯಾಂಕ್‌ಗಳ ದೈನಂದಿನ ವ್ಯವಹಾರ ಗ್ರಾಹಕರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ನಡೆದಾಗ ಮಾತ್ರ ಗ್ರಾಹಕರಿಗೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಜನ ಸಾಮಾನ್ಯರಿಗೆ ಬ್ಯಾಂಕಿನ ಎಲ್ಲ ಸೌಲಭ್ಯಗಳು ಸರಳವಾಗಿ, ಸುಲಭವಾಗಿ ಸಿಗುವಂತಾಗಬೇಕು. ಸ್ಥಳೀಯರಿಗೆ ಅವಕಾಶ ಸಿಗಬೇಕು. ಇದು ನಮ್ಮ ರಾಜ್ಯದ ಅಸ್ಮಿತೆಯ ಪ್ರಶ್ನೆಯಾಗಿದೆ. ಹೀಗಾಗಿ ಐಬಿಪಿಎಸ್ ವತಿಯಿಂದ ಮುಂದಿನ ಸೆ.9 ಮತ್ತು 10 ರಂದು ನಡೆಯಲಿರುವ ಪರೀಕ್ಷೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪತ್ರ ಬರೆಯಬೇಕು. ಹಾಗೂ ಸ್ಥಳೀಯ ಭಾಷೆಗಳ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News