ಮಿಲೊಸ್ ರಾವೊನಿಕ್ ಯುಎಸ್ ಓಪನ್‌ಗೆ ಅಲಭ್ಯ

Update: 2017-08-24 10:21 GMT

ನ್ಯೂಯಾರ್ಕ್, ಆ.24: ಎಡ ಮಣಿಗಂಟಿನ ನೋವಿನಿಂದ ಬಳಲುತ್ತಿರುವ ಕೆನಡಾದ ಟೆನಿಸ್ ಆಟಗಾರ ಮಿಲೊಸ್ ರಾವೊನಿಕ್ ಮುಂಬರುವ ಪ್ರತಿಷ್ಠಿತ ಅಮೆರಿಕನ್ ಓಪನ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

11ನೆ ರ್ಯಾಂಕಿನ ಆಟಗಾರ ರಾವೊನಿಕ್ ಕಳೆದ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ರನ್ನರ್-ಅಪ್ ಪ್ರಶಸ್ತಿ ಪಡೆದಿದ್ದರು.

ಸೋಮವಾರ ಆರಂಭವಾಗಲಿರುವ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿಯಿಂದ ಹೊರಗುಳಿಯುತ್ತಿರುವುದಾಗಿ ಕಳೆದ ರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ರಾವೊನಿಕ್ ಬಹಿರಂಗಪಡಿಸಿದ್ದಾರೆ. ರಾವೊನಿಕ್ ಯುಎಸ್ ಓಪನ್‌ನಿಂದ ಹೊರಗುಳಿಯುತ್ತಿರುವ ಅಗ್ರ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.

12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್, 2016ರ ಯು.ಎಸ್. ಓಪನ್ ಚಾಂಪಿಯನ್ ಸ್ಟ್ಟಾನ್ ವಾವ್ರಿಂಕ ಹಾಗೂ 2014ರ ಯುಎಸ್ ಓಪನ್ ಫೈನಲಿಸ್ಟ್ ಜಪಾನ್‌ನ ಕೀ ನಿಶಿಕೊರಿ ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ.

ಮಹಿಳೆಯರ ಸಿಂಗಲ್ಸ್ ಆಟಗಾರ್ತಿಯರಾದ 23 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಹಾಗೂ 2 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವಿಕ್ಟೋರಿಯ ಅಝರೆಂಕಾ ವೈಯಕ್ತಿಕ ಕಾರಣದಿಂದ ಯುಎಸ್ ಓಪನ್‌ನಿಂದ ಹೊರಗುಳಿಯುತ್ತಿದ್ದಾರೆ. ಸೆರೆನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರೆ, ಅಝರೆಂಕಾ ಡಿಸೆಂಬರ್‌ನಲ್ಲಿ ಜನಿಸಿರುವ ಗಂಡುಮಗುವಿನ ಕಸ್ಟಡಿ ಕೇಸ್‌ಗೆ ಸಂಬಂಧಿಸಿ ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News