ಮೊಬೈಲ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಆ.24: ಮೋಜಿನ ಜೀವನ ನಡೆಸುವ ಸಲುವಾಗಿ ದುಬಾರಿ ಮೊಬೈಲ್ ಇಟ್ಟುಕೊಂಡವರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ನದೀಮ್ ಪಾಶಾ, ಆಸೀಫ್ ಪಾಷಾ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿ ಆಸೀಫ್ ಪಾಷಾ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಹೆಚ್ಚಿನ ಹಣ ಗಳಿಸುವ ಆಮೀಷಕ್ಕೊಳಗಾಗಿ ನದೀಮ್ ಪಾಷಾ ಜೊತೆ ಸೇರಿ ಮೊಬೈಲ್ ಕದಿಯುವ ಕೃತ್ಯ ನಡೆಸುತ್ತಿದ್ದರು. ದುಬಾರಿ ಬೆಲೆಯ ಮೊಬೈಲ್‌ಗಳನ್ನು ಇಟ್ಟುಕೊಂಡವರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.
ಸ್ನೇಹಿತನಿಗೆ ಅಪಘಾತವಾಗಿದೆ ಮನೆಯವರಿಗೆ ಕರೆ ಮಾಡಬೇಕಾಗಿದೆ ಎಂದು ಮೊಬೈಲ್ ಪಡೆದು ಕದ್ದು ಪರಾರಿಯಾಗುತ್ತಿದ್ದರು. ಈ ಬಗ್ಗೆ ದೂರು ಪಡೆದ ಅಶೋಕ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, 2.5 ಲಕ್ಷ ರೂ. ಮೌಲ್ಯದ 24 ಮೊಬೈಲ್, 1 ಬೈಕ್ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.