ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೇಔಟ್ ವೆಲ್‌ಫೇರ್ ಅಸೋಸಿಯೇಶನ್ ಖಂಡನೆ
ಬೆಂಗಳೂರು, ಆ.24: ನಗರದ ಜಲಭವನ ಲೇಔಟ್‌ನಲ್ಲಿನ ರಸ್ತೆಗಳಲ್ಲಿ ಅಕ್ಕಪಕ್ಕದ ನಿವಾಸಿಗಳು ಕಸ ತಂದು ರಾಶಿ ಹಾಕುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಲೇಔಟ್ ನಿವಾಸಿಗಳು ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೇಔಟ್ ವೆಲ್‌ಫೇರ್ ಅಸೋಸಿಯೇಶನ್ ಕಾರ್ಯದರ್ಶಿ ಎನ್.ಕೆ.ಕುಮಾರ್, ಲೇಔಟ್‌ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ನಮ್ಮ ಲೇಔಟ್‌ನಲ್ಲಿ ಅಕ್ಕಪಕ್ಕದ ನಿವಾಸಿಗಳು ಕಸ ತಂದು ಸುರಿಯುತ್ತಿದ್ದಾರೆ ಎಂದು ಹೇಳಿದರು.
ಲೇಔಟ್‌ನಲ್ಲಿ 70 ಮನೆಗಳಿವೆ. ಆದರೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದ್ವಿ ಚಕ್ರ ವಾಹನಗಳು ಸಂಚರಿಸಲು ಅಗತ್ಯವಿರುವಷ್ಟು ರಸ್ತೆ ವ್ಯವಸ್ಥೆಯಿಲ್ಲ. ಅಲ್ಲದೆ, ಅಕ್ಕಪಕ್ಕದವರು ಅನಧಿಕೃತ ಪಾರ್ಕಿಂಗ್ ಮಾಡುತ್ತಿದ್ದು, ಇಲ್ಲಿನ ನಿವಾಸಿಗಳ ವಾಹನಗಳು ಸಂಚರಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ. ಹೀಗಾಗಿ, ಕೂಡಲೇ ಈ ಕುರಿತು ಪಾಲಿಕೆ ಹಾಗೂ ಬಿಡಿಎ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.