ಗೋರಖ್‌ಪುರದ ಆಸ್ಪತ್ರೆಯಲ್ಲಿ ಈಗಲೂ ಪ್ರತಿ ಮೂವರು ಮಕ್ಕಳಲ್ಲಿ ಒಂದು ಮಿದುಳುಜ್ವರಕ್ಕೆ ಬಲಿ

Update: 2017-08-24 15:21 GMT

ಗೋರಖ್‌ಪುರ,ಆ.24: ಗೋರಖ್‌ಪುರದ ಸರಕಾರಿ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 70ಕ್ಕೂ ಅಧಿಕ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಆಮ್ಲಜನಕ ಪೂರೈಕೆ ಸಂಸ್ಥೆಯ ವಿರುದ್ಧ ಕ್ರ್ರಿಮಿನಲ್ ಕ್ರಮಕ್ಕೆ ಆದೇಶಿಸಿದ್ದಾರೆ. ಆದರೆ 950 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಈಗಲೂ ಪ್ರತಿದಿನ 15-20 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಈ ಸಾವುಗಳ ಪೈಕಿ ಮೂರನೇ ಒಂದರಷ್ಟು ಸಾವುಗಳಿಗೆ ಮಿದುಳು ಜ್ವರ ಕಾರಣವಾಗಿದೆ.

ಜು.1ರಿಂದ ಆ.14ರ ನಡುವೆ ಈ ಆಸ್ಪತ್ರೆಯಲ್ಲಿ ಸಂಭವಿಸಿರುವ 1,527 ಮಕ್ಕಳ ಸಾವುಗಳ ಪೈಕಿ 97 ಸಾವುಗಳಿಗೆ ಜಪಾನೀಸ್ ಎನ್‌ಸಿಫಾಲಿಟಿಸ್(ಜೆಇ) ಮತ್ತು ಎಕ್ಯೂಟ್ ಎನ್‌ಸಿಫಾಲಿಟೀಸ್ ಸಿಂಡ್ರೋಮ್(ಎಇಎಸ್) ಕಾರಣವಾಗಿದ್ದವು.

ಎನ್‌ಸಿಫಾಲಿಟೀಸ್ ಮಿದುಳಿನಲ್ಲಿ ಊತವನ್ನುಂಟು ಮಾಡುತ್ತದೆ ಮತ್ತು ದಿಢೀರ್ ಜ್ವರ, ತಲೆನೋವು, ಕುತ್ತಿಗೆ ಸೆಟೆಯುವಿಕೆ, ಸೆಳವು ಇತ್ಯಾದಿಗಳಿಗೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ರೋಗಿಗೆ ಸಾವನ್ನು ತರುತ್ತದೆ.

ಜ.1ರಿಂದ ಆ.22ರವರೆಗೆ ಈ ಆಸ್ಪತ್ರೆಯಲ್ಲಿ 625 ಎಇಎಸ್ ಪೀಡಿತರು ದಾಖಲಾ ಗಿದ್ದು, ಈ ಪೈಕಿ 158 ಮಕ್ಕಳು ಸಾವನ್ನಪ್ಪಿವೆ. ಶೇ.30ಕ್ಕೂ ಅಧಿಕ ಸಾವುಗಳು ಜುಲೈನಿಂದ ಆಗಸ್ಟ್ ಮಧ್ಯಭಾಗದವರೆಗಿನ ಅವಧಿಯಲ್ಲಿ ಸಂಭವಿಸಿವೆ.

ಆ.14ರಂದು ಯಾವುದೇ ಬಗೆಯ ವ್ಯತ್ಯಯವಿರದಿದ್ದರೂ ಒಂದೇ ದಿನದಲ್ಲಿ 24 ಮಕ್ಕಳು ಸಾವನ್ನಪ್ಪಿದ್ದವು. ವರ್ಷದ ಈ ಸಮಯದಲ್ಲಿ ದಿನಕ್ಕೆ ಸರಾಸರಿ 10ರಿಂದ 20 ಸಾವುಗಳು ಸಂಭವಿಸುತ್ತವೆ. ಈ ಪೈಕಿ ಎಇಎಸ್‌ನಿಂದ ಅತಿ ಹೆಚ್ಚು, ಅಂದರೆ ಶೇ.30ರಷ್ಟು ಸಾವುಗಳು ಉಂಟಾಗುತ್ತವೆ. ಇದು ರೆಫರಲ್ ಆಸ್ಪತ್ರೆಯಾಗಿರುವುದರಿಂದ ವಿವಿಧ ಆಸ್ಪತ್ರೆಗಳಲ್ಲಿಯ ನವಜಾತ ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಇಲ್ಲಿಗೆ ತಂದು ದಾಖಲಿಸಲಾಗುತ್ತದೆ ಎಂದು ಬಿಆರ್‌ಡಿ ಆಸ್ಪತ್ರೆಯ ಹಿರಿಯ ಆಡಳಿತಾಧಿಕಾರಿಗಳೋರ್ವರು ಹೇಳಿದರು.

  ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಚಿಕಿತ್ಸೆಗಾಗಿ ಸ್ಥಳೀಯ ಔಷಧಿಗಳನ್ನು ಮಾಡಿಸುತ್ತಾರೆ ಮತು ್ತಸ್ಥಿತಿ ವಿಷಮಿಸಿದಾಗ ಇಲ್ಲಿಗೆ ತರುತ್ತಾರೆ. ಇದರ ಜೊತೆಗೆ ಇಲ್ಲಿಯೇ ಜನಿಸಿದ ಅನಾರೋಗ್ಯ ಪೀಡಿತ ನವಜಾತ ಶಿಶುಗಳು ಮತ್ತು ಅವಧಿಗೆ ಮುನ್ನವೇ ಜನಿಸಿದ ಮಕ್ಕಳ ಹೊರೆಯೂ ನಮಗಿರುತ್ತದೆ. ಹೀಗಾಗಿ ಸಾವುಗಳ ಸಂಖ್ಯೆ ಹೆಚ್ಚುತ್ತದೆ ಎಂದು ಹೊಸದಾಗಿ ನೇಮಕಗೊಂಡಿತರುವ ಪ್ರಾಂಶುಪಾಲ ಡಾ.ಪಿ.ಕೆ.ಸಿಂಗ್ ಹೇಳಿದರು.

ನಾವೂ ಯಾರನ್ನೂ ವಾಪಸ್ ಕಳುಹಿಸುವದಿಲ್ಲ. ಹೀಗಾಗಿ ಇಲ್ಲಿ ಒಂದು ಹಾಸಿಗೆಯಲ್ಲಿ 2-3 ಶಿಶುಗಳು ಅಥವಾ ಒಂದು ಇನ್‌ಕ್ಯುಬೇಟರ್‌ನಲ್ಲಿ ಎರಡು ಶಿಶುಗಳಿರುತ್ತವೆ. ನಮ್ಮ ಇತಿಮಿತಿಗಳಿಗೆ ಹೊಂದಿಕೊಂಡು ಅತ್ಯುತ್ತಮ ಚಿಕಿತ್ಸೆಯನ್ನು ನಾವು ಒದಗಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸೊಳ್ಳೆಗಳಿಂದ ಉಂಟಾಗುವ ಮಿದುಳು ಜ್ವರದ ವಿರುದ್ಧ ಮಕ್ಕಳಿಗೆ ಲಸಿಕೆಗಳನ್ನು ನೀಡಲಾಗುತ್ತಿರುವುದರಿಂದ ಸಾವುಗಳ ಸಂಖ್ಯೆ ತಗ್ಗಿದೆ. ಈಗ ಹೆಚ್ಚಿನ ಸಾವುಗಳು ಎಇಎಸ್‌ನಿಂದ ಸಂಭವಿಸುತ್ತಿವೆ ಎಂದು ಸಮುದಾಯ ಔಷಧಿ ವಿಭಾಗದ ಉಪನ್ಯಾಸಕ ಡಾ.ಹರೀಶ ತಿವಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News