×
Ad

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕ್ಷಮೆಯಾಚನೆಗೆ ಆಗ್ರಹ

Update: 2017-08-24 20:38 IST

ಬೆಂಗಳೂರು, ಆ. 24: ಉದ್ಯೋಗ ಸೃಷ್ಟಿಸುವಂತೆ ಮನವಿ ಸಲ್ಲಿಸಲು ಬಿಜೆಪಿ ಕಚೇರಿಗೆ ಹೋಗಿದ್ದ ಯುವಜನರನ್ನು ಮಳೆಯಲ್ಲಿ ನೆನೆಸಿದ್ದಕ್ಕೆ ಉದ್ಯೋಗಕ್ಕಾಗಿ ಯುವಜನರು ಸಂಘಟನೆ ಖಂಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕ್ಷಮೆಯಾಚಿಸುವಂತೆ ಯುವ ಜನರು ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಸಂಚಾಲಕ ಸರೋವರ, ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ ತಿಳಿಯಲು ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಎಲ್ಲ ಪಕ್ಷದವರಿಗೆ ಮನವಿ ಮೂಲಕ ಸಲ್ಲಿಸಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸುವ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಮನವಿ ಸ್ವೀಕರಿಸಿದರು. ಅದರಂತೆ, ಬಿಜೆಪಿ ಕಚೇರಿಗೂ ತೆರಳಿದ್ದೆವು. ಈ ವೇಳೆ ಪಕ್ಷದ ಜವಾಬ್ದಾರಿಯುತ ಯಾರೊಬ್ಬ ನಾಯಕರು ಬರಲಿಲ್ಲ. ಅಲ್ಲದೆ, ನೀವು ಕಚೇರಿ ಬಿಟ್ಟು ಹೋಗಲಿಲ್ಲ ಎಂದಾದರೆ, ಪೊಲೀಸರನ್ನು ಕರೆಸಲಾಗುತ್ತದೆ ಎಂದು ಧಮ್ಕಿ ಹಾಕಿದರು.

ಅನಂತರ ಸುಮಾರು 3 ಗಂಟೆಗಳ ಕಾಲ ಯುವಕ-ಯುವತಿಯರು ಮಳೆಯಲ್ಲಿಯೇ ನಿಂತು, ಸಂಬಂಧಪಟ್ಟವರು ಬರಬೇಕು ಎಂದು ಆಗ್ರಹಿಸಲಾಯಿತು. ಆದರೂ, ಯಾರು ಸ್ಪಂದಿಸಲಿಲ್ಲ. ಇದಕ್ಕೆ ಬಿಜೆಪಿ ಅಧ್ಯಕ್ಷರೇ ಹೊಣೆಯಾಗಿದ್ದು, ಕೂಡಲೇ ಅವರು ಕ್ಷವೆುಯಾಚಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಶಿವರಾಜ್ ಮಾತನಾಡಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ಪದವಿ ಪಡೆದ ಸರ್ಟಿಫಿಕೇಟ್‌ಗಳು ಕೈನಲ್ಲಿ ಹಿಡಿದುಕೊಂಡು ಕೆಲಸಕ್ಕಾಗಿ ಹಲವರು ಸುತ್ತಿದ್ದಾರೆ. ಇನ್ನೊಂದಿಷ್ಟು ಜನರು ಗಾರ್ಮೆಂಟ್ ಹಾಗೂ ಇತರೆ ಅಭದ್ರತೆಯ ವಾತಾವರಣದಲ್ಲಿ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಸಮಿತಿ ಸದಸ್ಯೆ ಪ್ರತಿಮಾ ಮಾತನಾಡಿ, ದೇಶದ ಜನರು ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳ ಮೇಲೆ ಭರವಸೆಯನ್ನಿಟ್ಟು ಮತ ಹಾಕಿದ್ದಾರೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಿನ ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 10 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಮಾಡಬೇಕು. ಇಲ್ಲದಿದ್ದರೆ ‘ಉದ್ಯೋಗ ಇಲ್ಲದಿದ್ದರೆ, ಮತವಿಲ್ಲ’ ಎಂಬ ಅಭಿಯಾನ ನಡೆಸಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News