×
Ad

ನೈಜೀರಿಯಾ ಮೂಲದ ವ್ಯಕ್ತಿಯಿಂದ ಮಾದಕ ವಸ್ತು ವಶ

Update: 2017-08-25 16:59 IST

ಬೆಂಗಳೂರು, ಆ.25: ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಗರದ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯದ ಚರ್ಚ್‌ಸ್ಟ್ರೀಟ್ ರಸ್ತೆಯ ನಿವಾಸಿ ನೈಜೀರಿಯಾ ಮೂಲದ ವ್ಯಕ್ತಿಯಿಂದ ಮಾದಕ ವಸ್ತುಗಳಾದ ಕೊಕೆನ್ ಮತ್ತು ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ನೈಜೀರಿಯಾದ ಅನಂಬ್ರಾ ರಾಜ್ಯದ ಅಲ್ಲೋಯ್ ಉಚೇಚ್ಕುವು ಒಗುಎಜಿಯೊಫಾರ್(43) ಎಂದು ಗುರುತಿಸಲಾಗಿದೆ. ಮಾದಕ ವಸ್ತುಗಳ ಕೊಕೆನ್ ಹಾಗೂ ಎಂಡಿಎಂಎ ಅನ್ನು ತನ್ನ ವಶದಲ್ಲಿಟ್ಟುಕೊಂಡು ಸಂಘಟಿತ ರೀತಿಯಲ್ಲಿ ಗ್ರಾಹಕರುಗಳಿಗೆ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದವನನ್ನು ಮಾದಕ ವಸ್ತು ಸಮೇತ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯಿಂದ ಸುಮಾರು 75 ಗ್ರಾಂ ತೂಕದ ಕೊಕೆನ್ ಮತ್ತು 52 ಗ್ರಾಂ ತೂಕದ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 3 ಮೊಬೈಲ್, ಪಾಸ್‌ಪೋರ್ಟ್, ಒಂದು ನಕಲಿ ಐಡಿ ಕಾರ್ಡ್, ದ್ವಿಚಕ್ರ ವಾಹನ ಮತ್ತು ನಗದು ಹಣವನ್ನು ಅಮಾನತ್ತುಪಡಿಸಿದ್ದು, ಇದರ ವೌಲ್ಯ ಸುಮಾರು 13.45 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ಆರೋಪಿ ವೀಸಾ ನಿಯಮ ಉಲ್ಲಂಘಿಸಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ವಂಚಿಸಿ, ಅನ್ಯ ವ್ಯಕ್ತಿಯ ಹೆಸರಿನಲ್ಲಿ ಪಡೆದ ಸಿಮ್‌ಕಾರ್ಡ್‌ಗಳನ್ನು, ಡಿಫೆನ್ಸ್ ಅಧಿಕಾರಿಯ ಐಡಿ ಕಾರ್ಡನ್ನು ಸೃಷ್ಟಿಸಿಕೊಂಡು ತನ್ನ ಅನಧೀಕೃತ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆ ಮಾಡುತ್ತಾ ಮಾದಕ ವಸ್ತು ಮಾರಾಟ ಮಾಡಿ, ಅಕ್ರಮ ಲಾಭಗಳಿಸುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ಕಂಡು ಬಂದಿದೆ. ಆರೋಪಿ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News