×
Ad

ಬಹುಭಾಷಾ ವಿದ್ವಾಂಸ, ಸಾಮರಸ್ಯದ ಶಿಲ್ಪಿಡಾ. ಎಜಾಝುದ್ದೀನ್

Update: 2017-08-26 17:09 IST

ಹೆಸರು ತಿಳಿಯದೆ ಭಾಷಣ ಕೇಳುತ್ತಿದ್ದರೆ ಯಾರೋ ಪ್ರಖಾಂಡ ಬ್ರಾಹ್ಮಣ ಪಂಡಿತರು ವೇದಾಂತವನ್ನು ಉಪದೇಶಿಸುತ್ತಿದ್ದಾರೆಂದೋ, ಪ್ರಖ್ಯಾತ ಶರಣರು ವಚನೋಪದೇಶ ಮಾಡುತ್ತಿದ್ದಾರೆಂದೋ, ಜೈನ ವಿದ್ವಾಂಸರು ತೀರ್ಥಂಕರರ ಅಮೃತವಾಣಿಯನ್ನು ಉಸುರುತ್ತಿದ್ದಾರೆಂದೋ ಭಾವಿಸುವಷ್ಟರ ಮಟ್ಟಿಗೆ ಪ್ರಭಾವಯುತವಾಗಿ - ಅಧಿಕಾರಯುತವಾಗಿ ವಿಚಾರಗಳನ್ನು ಮಂಡಿಸುತ್ತಾ ಇಂದು ಅತ್ಯಗತ್ಯವಾಗರುವ ಸೌಹಾರ್ದವನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಪ್ರಸರಿಸುತ್ತಿದ್ದ ಹಿರಿಯ ವಿದ್ವಾಂಸರು - ಪ್ರಾಧ್ಯಾಪಕರು - ವಿಧಾನಪರಿಷತ್ತಿನ ಮಾಜಿ ಸದಸ್ಯರೂ ಆದ ಪ್ರೊ. ಎಜಾಝುದ್ದೀನ್ ಅವರು ನಿಧನರಾಗಿದ್ದಾರೆ.

2008ರಲ್ಲಿ ರವೀಂದ್ರಕಲಾಕ್ಷೇತ್ರದಲ್ಲಿ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಸೌಹಾರ್ದ ಸಮಾವೇಶ ನಡೆಸಿದಾಗ ಅದರ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಜಾಝುದ್ದೀನ್ ಅವರು ಮಾಡಿದ ಅಧ್ಯಕ್ಷಣಿಯ ಭಾಷಣ ಇಂದು ಕರಾವಳಿಯನ್ನು ಕಾಡುತ್ತಿರುವ ಭೂತಕ್ಕೆ ಉತ್ತರವೆನಿಸೀತು. ಮತ್ತೀಕೆರೆಯ ಮದ್ರಸಾದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿನಾಕಾರಣ ಕೋಪಗೊಂಡರೂ, ಅದ್ಭುತವಾಗಿ ಮಾತನಾಡಿದ ಡಾಕ್ಟರ್ ಎಜಾಝುದ್ದೀನ್, ಅದೇ ಮಹಮದೀಯರ ಕನ್ನಡ ವೇದಿಕೆಯು ನೀಡಿದ ಮೈಸೂರುಹುಲಿ ಟಿಪ್ಪುಸುಲ್ತಾನ್ ಪ್ರಶಸ್ತಿ ಸ್ವೀಕರಿಸಿ ಐತಿಹಾಸಿಕ ಭಾಷಣ ಮಾಡಿದ ಪ್ರಾಧ್ಯಾಪಕ ಎಜಾಝುದ್ದೀನ್, ಹೊಸಕೊಟೆಯ ಶಾಲೆಯಲ್ಲಿ ಮಕ್ಕಳೊಂದಿಗೆ ಹಾಡಾಡಿದ ಮಾನವೀಯ ಪ್ರತಿರೂಪ ಎಜಾಝುದ್ದೀನ್ ಎಲ್ಲರೂ ನೆನಪಾದರು. ಆತ್ಮೀಯತೆಯಿಂದ ಜನಾಬ್ ಪಿನಾಕಪಾಣಿ ಸಾಬ್ ಎಂದು ಕರೆಯುತ್ತಿದ್ದ ಹಿರಿಯ ಬಂಧು ಎಜಾಝುದ್ದೀನ್ ಮತ್ತೊಮ್ಮೆ ಕಾಡಿದರು.

08-01-1944ರಲ್ಲಿ ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ ಜನನ. ಇವರ ತಾಯಿಯ ತವರೂರು ತುಮಕೂರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತುಮಕೂರಿನಲ್ಲಿ ಪೂರೈಸಿದ ಎಜಾಝುದ್ದೀನ್ ದೇವರಾಯನದುರ್ಗದ ಸಮೀಪದ ತಮ್ಮ ತಾತನವರ ಹೊಲತೋಟಗಳಲ್ಲಿ ಬಾಲ್ಯವನ್ನು ಪ್ರಕೃತಿಯ ಸೊಬಗಿನೊಂದಿಗೆ ಸವಿದರು. ಮೂರು ವರ್ಷದವರಿದ್ದಾಗಲೇ ಲಕ್ವ ಹೊಡೆದ ಪರಿಣಾಮ ಒಂದು ಕಾಲನ್ನು ಕಳೆದುಕೊಂಡ ಎಜಾಝುದ್ದೀನ್ ಜೀವನದ ಬಗೆಗಿನ ಪ್ರೀತಿ ಮತ್ತು ತಮ್ಮ ಬಗೆಗಿನ ಆತ್ಮವಿಶ್ವಾಸವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಇಬ್ಬರು ತಮ್ಮಂದಿರು ಹಾಗೂ ನಾಲ್ಕು ಜನ ತಂಗಿ ಯರ ಒಟ್ಟು ಕುಟುಂಬದ ಪ್ರೀತಿಯನ್ನು ಹಂಚಿಕೊಂಡು ಬೆಳೆದರು.

ಉರ್ದುವಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾಡಿದ ಎಜಾಝುದ್ದೀನ್ ಬಾಲ್ಯದಲ್ಲಿಯೇ ಪ್ರತಿಭಾವಂತರಾಗಿದ್ದು ಡಬ್ಬಲ್ ಪ್ರಮೋಷನ್ ಪಡೆದು ಚಿಕ್ಕ ವಯಸ್ಸಿನಲ್ಲಿಯೇ ಪ್ರೌಢಶಿಕ್ಷಣವನ್ನು ಪಡೆದರು. ಗುರುಗಳಾಗಿದ್ದ ಪ್ರೊ. ಟಿ.ಎನ್. ಸೀತಾರಾಮಯ್ಯನವರು ಇವರ ಬುದ್ಧಿಮತ್ತೆಯನ್ನು ಗುರುತಿಸಿ ಎರಡನೆ ಭಾಷೆಯಾಗಿ ಸಂಸ್ಕೃತವನ್ನು ಕೊಡಿಸಿದರು. ಮನೆಯ ಭಾಷೆ ಉರ್ದು, ಮಾಧ್ಯಮ ಇಂಗ್ಲಿಷ್, ಎರಡನೆ ಭಾಷೆ ಸಂಸ್ಕೃತ.... ಹೀಗೆ ಬಹುಭಾಷೆಗಳನ್ನು ಬಾಲ್ಯದಲ್ಲಿಯೇ ಕಲಿತವರು ಎಜಾಝುದ್ದೀನ್. ಅತ್ಯಂತ ಶ್ರದ್ಧೆಯಿಂದ ಸಂಸ್ಕೃತದ ಗ್ರಂಥಗಳನ್ನು ಹಾಗೂ ಹಿಂದೂ ಧರ್ಮದ ಗ್ರಂಥಗಳನ್ನು ಅಭ್ಯಾಸ ಮಾಡಿದ ಎಜಾಝುದ್ದೀನ್ ಸೌಹಾರ್ದಶಿಲ್ಪಿಯಾದರು. ತುಮಕೂರಿನ ಸರಕಾರಿ ಕಾಲೇಜಿನಲ್ಲಿ ಹಿಂದಿ ಭಾಷೆಯನ್ನು ಐಚ್ಚಿಕವಾಗಿ ತೆಗೆದುಕೊಂಡು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಹಿಂದಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಅವರ ಪ್ರೌಢ ಪ್ರಬಂಧ ಹಿಂದಿ ಕಾವ್ಯದಲ್ಲಿ ವೀರರಸ; ಶಾಸ್ತ್ರೀಯ ಅಧ್ಯಯನ. ಇದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ.

ಬೆಂಗಳೂರಿನ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿ ಸೇವೆಯನ್ನು ಆರಂಭಿಸಿದ ಪ್ರೊ. ಎಜಾಝುದ್ದೀನ್ ಅವರು 1973 ಕಾಲೇಜು ವಿಭಜನೆಗೊಂಡ ನಂತರ ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಅಂದು ವಿದ್ಯಾರ್ಥಿ ಸಂಘಕ್ಕೆ ನಡೆಯುತ್ತಿದ್ದ ಚುನಾವಣೆ ತೀವ್ರ ಸ್ಪರ್ಧೆ ಯಿಂದ ಕೂಡಿತ್ತು. ಚುನಾವಣೆಗಳನ್ನು ಏರ್ಪಡಿಸುವುದು ಕಾಲೇಜಿಗೆ ಸವಾಲಿನ ಕೆಲಸವಾಗಿತ್ತು. ಇಂತಹ ಸಂದರ್ಭದಲ್ಲಿ ಎಜಾಝುದ್ದೀನ್ ಅವರು ವಿದ್ಯಾರ್ಥಿ ಸಂಘಕ್ಕೆ ನಡೆಯುತ್ತಿದ್ದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸೌಹಾರ್ದದಿಂದ ಚುನಾವಣೆಯನ್ನು ನಡೆಸಿದ ಹೆಗ್ಗಳಿಕೆ ಇವರದಾಗಿತ್ತು.

ಹಿಂದಿ ಪ್ರಾಧ್ಯಾಪಕರಾದರೂ ಎಲ್ಲ ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿದ್ದವರು ಪ್ರೊ. ಎಜಾಝುದ್ದೀನ್. ಬಸವಣ್ಣ ಹೇಳುವಂತೆ ಪ್ರೀತಿ ವಿಶ್ವಾಸದ ಮತ್ತು ಸ್ವಾಭಿಮಾನದ ಮಹತ್ತನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ ಆದರ್ಶ ಅಧ್ಯಾಪಕ ಅವರು. ಇಂದು ಅವರ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾಗಿ, ಸಚಿವರುಗಳಾಗಿ, ಶಾಸಕರಾಗಿದ್ದಾರೆ. ಆದರೂ ಅವರೆಲ್ಲರೂ ಪ್ರೊ. ಎಜಾಝುದ್ದೀನ್ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಪ್ರೊಫೆಸರರ ಅಂತ್ಯಕ್ರಿಯೆಯಲ್ಲಿ ಸಚಿವ ರಮೇಶಕುಮಾರ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹೀಂ, ಶಾಸಕ ಡಾ. ಅಶ್ವತ್ಥನಾರಾಯಣರಾದಿಯಾಗಿ ಭಾಗವಹಿಸಿದ ದಂಡು ಅವರ ಹಿರಿಮೆಯನ್ನು ಸಾರುತ್ತಿತ್ತು.

ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಹಿಂದಿ ವಿಭಾಗದ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಪಠ್ಯಪುಸ್ತಕ ಹಾಗೂ ಪರೀಕ್ಷಾ ಮಂಡಳಿಗಳ ಸದಸ್ಯ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಎಜಾಝುದ್ದೀನ್ ಕೇಂದ್ರ ಲೋಕಸೇವಾ ಆಯೋಗದ ಐ.ಎ.ಎಸ್. ಪರೀಕ್ಷೆಗಳಿಗೆ ಭಾಷಾ ವಿಶೇಷ ತಜ್ಞರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಸಂದರ್ಶನಗಳಲ್ಲಿ ಹಿಂದಿ ಉಪನ್ಯಾಸಕ ಹಾಗೂ ರೀಡರ್‌ಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಹಿರಿಮೆಯನ್ನು ಹೊಂದಿದ್ದರು.

1995ರಲ್ಲಿ ಕರ್ನಾಟಕ ವಿಧಾನಪರಿಷತ್ತಿಗೆ ನಾಮಕರಣ ಸದಸ್ಯರಾಗಿ ನೇಮಕಗೊಂಡ ಪ್ರೊ. ಎಜಾಝುದ್ದೀನ್ ಅವರು ನಾಡಿನಲ್ಲಿ ಶಾಂತಿ - ನೆಮ್ಮದಿಯ ಬದುಕಿನ ಸೌಹಾರ್ದದ ಅಗತ್ಯವನ್ನು, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಸೂತ್ರಗಳ ಕುರಿತು ಶಾಸನಸಭೆಯಲ್ಲಿ ಪರಿಣಾಮಕಾರಿಯಾಗಿ ವಿಚಾರಗಳನ್ನು ಮಂಡಿಸಿದ್ದಾರೆ. ಶಾಸನಸಭೆಯ ಹಲವು ಸದನ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ನಾಡಿಗೆ ಉಪಯುಕ್ತ ಕೊಡುಗೆಯನ್ನು ನೀಡಿದ್ದಾರೆ.

ಪ್ರೊ. ಎಜಾಝುದ್ದೀನ್ ಅವರ ವಿಶೇಷತೆಯೇ ಅವರ ಉಪನ್ಯಾಸ ಧಾರೆ. 1967 ರಿಂದ ಬದುಕಿನ ಉದ್ದಕ್ಕೂ ಸರ್ವಧರ್ಮಗಳ ಸಾಮರಸ್ಯದ ಕುರಿತಾಗಿ ಕರ್ನಾಟಕ ಹಾಗೂ ಭಾರತದ ವಿವಿಧ ಭಾಗಗಳಲ್ಲಿ ಪರಿಣಾಮಕಾರಿಯಾದ ಉಪನ್ಯಾಸಗಳನ್ನು ನೀಡಿ ಸೌಹಾರ್ದ ಮಂತ್ರವನ್ನು ಜಪಿಸಿದ್ದು ಅವರ ವಿಶೇಷತೆಯಾಗಿತ್ತು. ಧರ್ಮಸ್ಥಳ, ಸಿದ್ಧಗಂಗೆ, ಚಿತ್ರದುರ್ಗ, ಸುತ್ತೂರು, ಆದಿಚುಂಚನಗಿರಿ, ಸಿರಿಗೆರೆ, ಹುಬ್ಬಳ್ಳಿ, ಶ್ರವಣಬೆಳಗೊಳ, ಹೊಂಬುಜ, ಮೂಡುಬಿದರೆ, ಕಲಬುರಗಿ, ಹಲವು ರಾಮಕೃಷ್ಣಾಶ್ರಮಗಳು, ತಮಿಳುನಾಡಿನ ಸೇಲಂ, ಕರ್ನಾಟಕ ಆಂಧ್ರದ ಪ್ರಮುಖ ದರ್ಗಾಗಳು, .... ಹೀಗೆ ಅವರ ವಾಗ್ದಾರೆ ಹರಡಿತ್ತು. ವಿವಿಧ ಸಾಹಿತ್ಯ ಸಮ್ಮೇಳನಗಳು, ಸರ್ವಧರ್ಮ ಸಮ್ಮೇಳನಗಳು, ಕಾಲೇಜುಗಳು, ಪಾಠಶಾಲೆಗಳು, ಮಂದಿರ  ಮಸೀದಿಗಳು, ಗುರುದ್ವಾರ, ಚರ್ಚು, ರೋಟರಿ, ಲಯನ್ಸ್ ಸಭೆಗಳಲ್ಲಿ ಕೋಮು ಸೌಹಾರ್ದ ಮತ್ತು ರಾಷ್ಟ್ರೀಯ ಭಾವೈಕ್ಯ ಕುರಿತು ಅದ್ಭುತವಾದ ವಿಚಾರಗಳನ್ನು ಮಂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಹಿರಿಮೆ ಅವರದು.

ಬದುಕಿನ ಮೌಲ್ಯಗಳನ್ನು ತಿಳಿಹೇಳುವುದರ ಮೂಲಕ ಹಲವರ ಅಂಕುಡೊಂಕುಗಳನ್ನು ತಿದ್ದಿರುವ ಪ್ರೊ. ಎಜಾಝುದ್ದೀನ್ ಸಾಹೇಬರು, ಹಲವಾರು ಸಮಸ್ಯೆಗಳನ್ನು ಹೊತ್ತು ಇವರ ಬಳಿಗೆ ಬಂದವರಿಗೆ ಸಾಂತ್ವನದ ನುಡಿಗಳನ್ನು ಹೇಳುವುದರೊಂದಿಗೆ ಅವರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ಅಧಿಕಾರಿ  ರಾಜಕಾರಣಿ, ಧಾರ್ಮಿಕ ಮುಖಂಡರವರೆಗೆ ಚಿರಪರಿಚಿತರಾದ ಡಾ. ಎಜಾಝುದ್ದೀನ್ ಅವರು ಅರಮನೆ, ಗುರುಮನೆ, ಎಲ್ಲೆಡೆ ಸಲ್ಲುವವರಾಗಿದ್ದ ಅಪರೂಪದ ಅಪರೂಪಿ. ಅವರು ಎಲ್ಲರಿಗೂ ಬೇಕಾದವರಾಗಿದ್ದರು.

ಪ್ರವಚನಗಳಲ್ಲಿಯೇ ಹೆಚ್ಚು ಕಾಲವನ್ನು ಕಳೆದ ಡಾ. ಎಜಾಝುದ್ದೀನ್ ಅವರು ಹಲವಾರು ಲೇಖನಗಳನ್ನು ನಾಡಿನ ಪತ್ರಿಕೆಗಳಿಗೆ ಬರೆದಿದ್ದಾರೆ. ದಿವ್ಯ ಕುರ್‌ಆನನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ತೀರ್ಥಂಕರ ಮಹಾವೀರ ವಿಶ್ವ’, ‘ಧರ್ಮದ ದಶಲಕ್ಷಣಗಳು’, ‘ದಾದಾ ಹಝ್ರತ್ ಕಲಂದರ್’, ‘ಇಸ್ಲಾಂ ದರ್ಶನ’, ‘ಪ್ರತಿಜ್ಞಾ ಗಾಂಗೇಯ’, ‘ಮುಹಮ್ಮದ್ ಪೈಗಂಬರ್’, ‘ಮಹಾವೀರ ಭಕ್ತಿಗಂಗಾ’, ‘ಪುರುದೇವಾ ಭಕ್ತಿಗಂಗಾ’, ‘ಹಿಂದಿಕಾವ್ಯದಲ್ಲಿ ವೀರರಸ’, ‘ಇಸ್ಲಾಂ ಧರ್ಮದಲ್ಲಿ ಮಾನವೀಯ ಮೌಲ್ಯಗಳು’, ‘ಭಾರತೀಯ ಸಂಸ್ಕೃತಿಯ ಮೇಲೆ ಇಸ್ಲಾಂ ಧರ್ಮದ ಪ್ರಭಾವ’, ‘ಈ ರಾಷ್ಟ್ರದ ಎರಡು ಭಯಂಕರ ರೋಗಗಳು ಅತ್ಯಾಚಾರ ಮತ್ತು ರಕ್ತಪಾತ’, ಪ್ರವಾದಿ ಮುಹಮ್ಮದ್ ಅವರ ಬೋಧನೆಗಳು .... ಮೊದಲಾದ ಕೃತಿಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ಹಿಂದಿ ಭಾಷೆಗಳಲ್ಲಿ ಬರೆದಿದ್ದಾರೆ.

ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಪಾಲಿ, ಪ್ರಾಕೃತ, ಉರ್ದು ಅಪಭ್ರಂಶ.... ಮೊದಲಾದ ಬಹುಭಾಷೆಗಳನ್ನು ಬಲ್ಲ ಡಾ. ಎಜಾಝುದ್ದೀನ್ ಅವರು ಬಹುಶ್ರುತ ಭಾಷಾ ಪಂಡಿತರು. ಇವರ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರಕಾರ ಇವರಿಗೆ 1987ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಾಹಿತ್ಯಶ್ರೀ ಪ್ರಶಸ್ತಿ, ಗುರುಸೇವಾ ಶಿರೋಮಣಿ ಪ್ರಶಸ್ತಿ, ಕಲ್ಪಶ್ರೀ ಪ್ರಶಸ್ತಿ, ರಾಷ್ಟ್ರೀಯ ಭಾವೈಕತಾ ಪ್ರಶಸ್ತಿ, ಮೈಸೂರು ಹುಲಿ ಟಿಪ್ಪುಸುಲ್ತಾನ್ ಪ್ರಶಸ್ತಿ, ಜೈನಪಂಡಿತ ಪ್ರಶಸ್ತಿ... ಮೊದಲಾದ ಪ್ರಶಸ್ತಿಗಳು ಇವರನ್ನು ಅಲಂಕರಿಸಿದ್ದವು. ಬಹುಶಃ ಕನ್ನಡನಾಡಿನಲ್ಲಿ ಇವರಿಗೆ ಸಂದ ಗೌರವ ಸಂಮಾನಗಳು ಬೇರ್ಯಾರಿಗೂ ಸಂದಿಲ್ಲವೆಂದೇ ಹೇಳಬಹುದು. ಅಷ್ಟು ಬಾರಿ ಸಾವಿರಾರು ಸಂಘ ಸಂಸ್ಥೆಗಳು ಇವರನ್ನು ಸತ್ಕರಿಸಿ ಗೌರವಿಸಿವೆ. ಧರ್ಮಧರ್ಮಗಳ ನಡುವೆ ವೈಷಮ್ಯ - ಸಂಶಯದ ಗೊಡೆ ಹಬ್ಬುತ್ತಿರುವ ಸಂದರ್ಭದಲ್ಲಿ ಎಜಾಝುದ್ದೀನ್ ಅವರಂಥವರು ನಮ್ಮ ನಾಡಿಗೆ ಬೇಕಾಗಿದ್ದವರು. ಎಲ್ಲ ಧರ್ಮಗಳ ತಿರುಳನ್ನು ಸತತ ಅಧ್ಯಯನದಿಂದ ತಿಳಿದಿದ್ದರು. ಅತ್ಯಂತ ಸರಳವಾಗಿ ಕಿತ್ತಲೆ ಹಣ್ಣು -ತೊಳೆ-ಸಿಪ್ಪೆ ಉದಾಹರಣೆಯ ಮೂಲಕ ಎಲ್ಲ ಧರ್ಮಗಳು ತೊಳೆಗಳಾದರೆ, ಮಾನವಧರ್ಮ ಹಣ್ಣಿನ ಸುತ್ತಲೂ ಇರುವ ಸಿಪ್ಪೆ ಎಂದು ಸೂಕ್ಷ್ಮವಾಗಿ ತಿಳಿಸಿ ಧಾರ್ಮಿಕ ಸಾಮರಸ್ಯ ಮತ್ತು ಐಕ್ಯಮತ್ಯದ ಆವಶ್ಯಕತೆಯನ್ನು ಪ್ರತಿಪಾದಿಸುತ್ತಿದ್ದ ಸೌಹಾರ್ದ ಶಿಲ್ಪಿ ಪ್ರೊ. ಎಜಾಝುದ್ದೀನ್ ಮತ್ತೆ ಮತ್ತೆ ನೆನಪಾಗುತ್ತಾರೆ.

ಅತ್ಯಂತ ಸರಳವಾಗಿ ‘ಕಿತ್ತಲೆ ಹಣ್ಣು -ತೊಳೆ-ಸಿಪ್ಪೆ’ ಉದಾಹರಣೆಯ ಮೂಲಕ ಎಲ್ಲ ಧರ್ಮಗಳು ತೊಳೆಗಳಾದರೆ, ಮಾನವಧರ್ಮ ಹಣ್ಣಿನ ಸುತ್ತಲೂ ಇರುವ ಸಿಪ್ಪೆ ಎಂದು ಸೂಕ್ಷ್ಮವಾಗಿ ತಿಳಿಸಿ ಧಾರ್ಮಿಕ ಸಾಮರಸ್ಯ ಮತ್ತು ಐಕ್ಯಮತ್ಯದ ಆವಶ್ಯಕತೆಯನ್ನು ಪ್ರತಿಪಾದಿಸುತ್ತಿದ್ದ ಸೌಹಾರ್ದ ಶಿಲ್ಪಿ ಪ್ರೊ. ಎಜಾಝುದ್ದೀನ್ ಮತ್ತೆ ಮತ್ತೆ ನೆನಪಾಗುತ್ತಾರೆ.

Writer - ಎಸ್. ಪಿನಾಕಪಾಣಿ

contributor

Editor - ಎಸ್. ಪಿನಾಕಪಾಣಿ

contributor

Similar News