‘ವ್ಯೋಮ ತಂಬೂರಿ ನಾದ’ದ ಸಮಕಾಲೀನತೆ
ಆ ಮಹಾದಾಸೋಹದ ಕಡೆ ಪಂಕ್ತಿಯ ಕೊನೆಯವನಾಗಿ ಬೊಗಸೆಯೊಡ್ಡಿದ ನನಗೇ ಖಾಲಿ ಬಟ್ಟಲ ಸವಾಲು!
ಪ್ರಸ್ತುತ ರಾಜ್ಯದಲ್ಲಿ ದಿನ ಬೆಳಗಾದರೆ ಬಹು ಚರ್ಚಿತವಾಗುತ್ತಿರುವ ವಿಚಾರ ಅನ್ನಕ್ಕೆ ಸಂಬಂಧಿಸಿದ್ದು, ಹೀಗಾಗಿ ಇಲ್ಲಿನ ಕವಿತೆಯ ಸಾಲುಗಳನ್ನು ಮತ್ತೆಮತ್ತೆ ನಮ್ಮೆಳಗೆ ತೆಗೆದುಕೊಂಡರೆ ‘ಅರೇ ಇದು ಇವತ್ತಿನ ಸಮಕಾಲೀನ ವಿಚಾರವೇ ಹೌದಲ್ಲ ?’ ಎಂದು ಹುಬ್ಬೇರಿಸಬಹುದು. ಹಾಗೆ ನೇರವಾಗಿ ‘ಅನ್ನದ ಋ ಋ’ ಎಂಬ ಕವಿತೆ ಹೇಳದಿದ್ದರೂ ಇದು, ಇಂದಿನ ಘಟನಾವಳಿಯನ್ನು ಆಧರಿಸಿಯೇ ಬರೆದದ್ದು ಎಂದು ಹೇಳಿ ಕೈತೊಳೆದುಕೊಳ್ಳುವ ಅಪಾಯವೂ ಇದೆ.
ಸರಕಾರ ಬಡವರಿಗೆ ಉಚಿತ ಅಕ್ಕಿ, ಕಡಿಮೆ ಬೆಲೆಗೆ ಉಪಾಹಾರ, ಊಟ ನೀಡುವ ಯೋಜನೆ ಕಾರ್ಯರೂಪಕ್ಕೆ ತರುತ್ತಿದ್ದಂತೆ ಜಾಗೃತವಾದ ಉಳ್ಳವರ ಮನಸ್ಸು ಬಡವರ ಅನ್ನದ ತಟ್ಟೆಗೇ ಕಲ್ಲೆಸೆಯುವ ಪ್ರಯತ್ನ ಮಾಡುತ್ತಿರುವುದೂ ವಾಸ್ತವವೇ. ಯುವ ಕವಿ ಆನಂದ ಕುಂಚನೂರ ಅವರ ‘ವ್ಯೋಮ ತಂಬೂರಿ ನಾದ’ ಸಂಕಲನದ ಆರಂಭದ ಕವಿತೆಯೇ ಇಂಥ ಸಮಕಾಲೀನ ವಿಚಾರಗಳ ಜಿಜ್ಞಾಸೆಗೆ ಈಡು ಮಾಡಿರುವುದಂತೂ ಸತ್ಯ. ಆದರೆ ಕವಿ ಆನಂದ ಈ ಕವಿತೆ ಬರೆದು ವರ್ಷದ ಮೇಲಾಗಿದೆ. ಓದುಗನಿಗೆ ಕಾವ್ಯದ ಭಾವ ತಟ್ಟುತ್ತಿದ್ದಂತೆ ಇದಕ್ಕೆ ಸೀಮಿತ ಅರ್ಥದ ಪರಿಧಿ ಇಲ್ಲಿ, ಒಡಲೊಳಗೆ ಹುದುಗಿದ ಮತ್ತೊಂದು ಲೋಕದ ಅನಾವರಣವಾಗುತ್ತದೆ ಎನ್ನಿಸುತ್ತದೆ.
ಕವಿ ಮನಸ್ಸು, ಕಾವ್ಯದ ಒಡಲು, ಸಮಕಾಲೀನಕ್ಕೆ ಸ್ಪಂದಿಸಬೇಕು. ಹಾಗೆ ಸ್ಪಂದಿಸದಿದ್ದರೆ ಸಮಾಜಮುಖಿ ಆಗುವುದಾದರೂ ಹೇಗೆ? ಕವಿ ಸಮಾಜದ ಭಾಗವೇ ಆದ್ದರಿಂದ ಜನರಿಂದ ದೂರವಾಗಿ ಕಲ್ಪನೆಯಲ್ಲಿಯೇ ಕಾವ್ಯದ ಕಣಜ ತುಂಬಲಾರ ಎಂಬ ಮಾತನ್ನು ಒಪ್ಪುವವರು ಇರುವಂತೆ ಅದನ್ನು ತಿರಸ್ಕರಿಸಿ ಸೃಜನಶೀಲತೆಗೆ ಹಣೆಪಟ್ಟಿ ಬೇಕಿಲ್ಲ ಎಂಬ ವಾದವನ್ನು ಮಂಡಿಸುವವರು ಇದ್ದಾರೆ.
ಕವಿಯ ಅಂತರಂಗ ಬೇರೆ, ಬಹಿರಂಗ ಬೇರೆ ಅಲ್ಲ, ತಾನು ಕಂಡುಂಡ ಜಗದ ಸತ್ಯವನ್ನು ಅದರ ಮರ್ಮವನ್ನು ಭಾಷೆ, ಲಯ, ರೂಪಕ, ಪ್ರತಿಮೆಗಳ ಮೂಲಕ ಕಟ್ಟಿಕೊಟ್ಟಾಗ ಅದೊಂದು ಸಶಕ್ತ ಕಾವ್ಯವಾಗುತ್ತದೆ.
ಹೀಗಾಗಿ ಬೊಗಸೆಯೊಡ್ಡಿದ ಕೈಗೆ ಖಾಲಿ ಬಟ್ಟಲು ದಕ್ಕಿದಾಗ ಸರತಿ ಸಾಲಲ್ಲಿ ನಿಂತ ಹಸಿದವನಿಗೆ ಉಳ್ಳವನು ಕೈಚಾಚಿ ಪಡೆದ ಅನ್ನದ ಸಮಕಾಲೀನ ವಿಚಾರ ಕೆದಕುವಂತಾಗುತ್ತದೆ. ಕವಿ ಕುಂಚನೂರು ಪ್ರಯೋಗಿಸಿದ ಈ ಸಂಕಲನದ ಬಹುತೇಕ ಕವಿತೆಗಳು ಹೊಸತು ಹೊಸತರ ತಾಜಾತನವನ್ನು ಬಿಂಬಿಸುತ್ತವೆ.
ವ್ಯೋಮ ಸಂಕಲನದ ಈ ಕವಿ ಸಾಹಿತ್ಯ ವಿದ್ಯಾರ್ಥಿ ಅಲ್ಲ. ಸಾಹಿತ್ಯವನ್ನು ಭಿನ್ನ ನೆಲೆಯಲ್ಲಿ ಗ್ರಹಿಸಿದವರು. ಫಾರ್ಮಸಿ ಓದಿದ್ದು. ಸಾಹಿತ್ಯಕ್ಕೂ ವೈದ್ಯಕೀಯ ಪರಿಭಾಷೆಗೂ ಸಂಬಂಧವಿಲ್ಲ. ಆದರೂ ಮನುಷ್ಯನ ಹುಡುಕಾಟ ಇವರ ಕಾವ್ಯದ ಸ್ಥಾಯೀಭಾವ. ಜೊತೆಗೆ ಸಮಕಾಲೀನ ಪ್ರಜ್ಞೆಗೆ ದಕ್ಕುವ ಬದುಕು ಮುನ್ನಡೆಸುವ ಆಧುನಿಕ ಶೈಲಿಯ ವಸ್ತು ಕಾವ್ಯದ ವಿನ್ಯಾಸವನ್ನು ಪಡೆದಿದೆ. ಆಧುನಿಕತೆ ಹೇಗೋ ಪುರಾಣ ಇತಿಹಾಸದ ಉತ್ಖನನದಲ್ಲಿ, ಆ ಮೂಲಕ ಕಾವ್ಯಕ್ಕೆ ಲಭ್ಯವಾಗುವ ವಿಶೇಷಣಗಳೂ ಅನೇಕ ಕವಿತೆಗಳಲ್ಲಿ ಮೈದಾಳಿವೆ. ಕವಿಯ ವಯೋಸಹಜ ಉತ್ಸಾಹ, ಜೀವನಪ್ರೀತಿ ‘ವ್ಯೋಮ’ ಜಗತ್ತಿನಿಂದ ನೆಲದ ‘ತಂಬೂರಿ ನಾದ’ವಾಗಿ ಹೊರ ಹೊಮ್ಮಿದೆ.
ಹಬೆಯಾಡುತ್ತ ದಿಗ್ಗೆಂದು ಹೊತ್ತಿಕೊಳ್ಳುವ ಉತ್ಸಾಹ
ಬೇಡವೆನ್ನುವಾಗ ಬೇಕೇ ಬೇಕಾಗುವ ಬಯಕೆ
ಹೆದೆಯೇರಿದರೂ ಓಡುವ ಆಸೆಗುದುರೆ
ಬೆರಳುಗಳು ಎಂಬ ಕವಿತೆಯ ಈ ಆಸೆಗುದುರೆ, ಪುರಾತ್ ಸಂಜ್ಞೆಯ ನೆತ್ತಿಯ ಮೇಲೆ ಎಂಬ ಕವಿತೆಯಲ್ಲಿ ಇಡುವ ಹೆಜ್ಜೆ, ಹರಪ್ಪಾ-ಮೊಹೆಂಜೊದಾರೊ ಹೆಸರು ಕಂಡದ್ದು ತೀರ ಇತ್ತೀಚೆಗೆ ಎಂದು ಇತಿಹಾಸದ ಝಲಕನ್ನು ಪ್ರಶ್ನಿಸುವ ಕಾವ್ಯ ನಾಟಕೀಯ ತಿರುವು ಪಡೆಯುತ್ತದೆ. ಕಾವ್ಯಾಭ್ಯಾಸಿಗೆ ಅಷ್ಟೇ ಅಲ್ಲ ಕೆಡವಿ ಹೊಸತನ್ನು ನಿರ್ಮಾಣ ಮಾಡುವ ಸಂಸ್ಕೃತಿ ಪ್ರಿಯರಿಗೂ ಇಲ್ಲೊಂದು ಚಾಲೆಂಜ್ ಎದುರಾಗುತ್ತಿದೆ.
ಸೃಷ್ಟಿ ಎದೆಯ ಮೇಲೆ ಕಾಲು ಕೆರೆದು
ದೀಪ ಹೊತ್ತಿಸಿಕೊಂಡ ಕಣ್ಣುಗಳಲ್ಲಿ ಓಡಿದ
ತೆಪ್ಪಗಿದ್ದ ಬೆಣಚುಕಲ್ಲು ತಂತಾನೆ ಉರಿದವು
ಎಂದು ಗ್ರಾಮೀಣ ಪರಿಸರದ ಕಾವ್ಯಪ್ರತಿಮೆ ಹಾಗೂ ಭಾಷಾ ಪ್ರಯೋಗದಿಂದ ಓದುಗನನ್ನು ಕಟ್ಟಿ ಹಾಕುವ ಕೆಲಸವನ್ನು ಈ ಕವಿತೆ ಯಶಸ್ವಿಯಾಗಿ ಮಾಡಿದೆ.
ವಿಶಿಷ್ಟ ಶೀರ್ಷಿಕೆಗಳ ಇಲ್ಲಿನ 37 ಕವಿತೆಗಳು ಪ್ರಯೋಗಾತ್ಮಕವಾಗಿವೆ. ಕವಿ ಪ್ರಯೋಗಶೀಲ ಅನ್ನುವುದಕ್ಕೆ ಈ ಕವಿತೆಗಳು ಹೊಸ ವಿನ್ಯಾಸದ ಕವಚ ಹೊಂದಿರುವುದೇ ಕಾರಣ.
ಈ ಸಂಕಲನದ ಹಲವಾರು ಕವಿತೆಗಳು ಓದುಗನ ಮನತಟ್ಟುವಲ್ಲಿ ಯಶಸ್ವಿಯಾಗಿವೆ.
ವಾತ್ಸಲ್ಯದ ಜೋಡುಪಥ ಸಂಭಾಷಣಾ ರೂಪದ ಧ್ವನಿಪೂರ್ಣ ಕವಿತೆಯಾಗಿ ಮೂಡಿ ಬಂದಿದೆ.
ಜತೆಗೆ ತಾಜಮಹಲಿನ ಒಂಟಿ ಪಾರಿವಾಳ, ನೆರಳ ಸೂತಕ, ಧರೆಯೊಳಗಾಡಿ ಬೆಳಗಿದವಳು,
ಆವ್ರವನದ ಅಜ್ಞಾತಿ, ಸಂಕಲನದ ಶೀರ್ಷಿಕೆ ಹೊತ್ತ ವ್ಯೋಮ ತಂಬೂರಿ ನಾದ
ಕವಿತೆಗಳ ವಸ್ತು, ವಿನ್ಯಾಸ, ಭಾಷೆ, ಲಯ, ರೂಪಕಗಳು ಪುಸ್ತಕ ಕೈಗೆತ್ತಿಕೊಂಡರೆ ಓದುವಂತೆ ಪ್ರೇರೇಪಿಸುತ್ತವೆ. ಈಚೆಗೆ ನಾನು ಕಂಡಂತೆ ಉತ್ತಮವಾಗಿ ಮುದ್ರಣಗೊಂಡು ಹೊರಬಂದ ಕವನ ಸಂಕಲನ ಇದಾಗಿದೆ.
ಪುಸ್ತಕದ ವಿವರ
ವ್ಯೋಮ ತಂಬೂರಿ ನಾದ (ಕವನ ಸಂಕಲನ)
ಕವಿ: ಆನಂದ ಕುಂಚನೂರು ಪ್ರಕಾಶನ: ಒನ್ ವೀಲರ್ ಪ್ರಕಾಶನ, ವೆಂಕಟಾಲ, ಬೆಂಗಳೂರು-64.
ಪುಟ: 86, ಬೆಲೆ ರೂ. 50/- (ಮೊದಲ ಮುದ್ರಣ: 2014)
ನಾನು ಓದಿದ ಪುಸ್ತಕ