ಇರಾವತಿ ಕರ್ವೆ ಅವರ ಸಂಸ್ಕೃತಿ ಚಿಂತನೆ

Update: 2017-08-26 18:48 GMT

ದೇಶದ ಖ್ಯಾತ ವಿದ್ವಾಂಸರಾಗಿರುವ ಇರಾವತಿ ಕರ್ವೆ ತಮ್ಮ ‘ಯುಗಾಂತ’ ಕೃತಿಯ ಮೂಲಕ ಕನ್ನಡ ಸಾಹಿತ್ಯ ಪ್ರಿಯರಿಗೂ ಚಿರಪರಿಚಿತರು. ಇದೀಗ ಅವರ ‘ನಮ್ಮ ಸಂಸ್ಕೃತಿ’ ಸಂಸ್ಕೃತಿ ಚಿಂತನೆಯ ಬಿಡಿ ಬರಹಗಳನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕಿಳಿಸಿದ್ದಾರೆ.

ಇರಾವತಿ ಕರ್ವೆಯವರ ಮೂಲ ಮರಾಠಿ ಗ್ರಂಥದಲ್ಲಿ ಒಟ್ಟು ಹದಿನಾಲ್ಕು ಲೇಖನಗಳಿವೆ. ನಾಲ್ಕು ಲೇಖನಗಳನ್ನು ಅನುವಾದಕರು ಕೈ ಬಿಟ್ಟಿದ್ದಾರೆ. ಭಾರತದ ಹಿಂದೂ ಸಂಸ್ಕೃತಿ, ಕ್ರೈಸ್ತ ಮತ್ತು ಮುಸ್ಲಿಮ್ ಸಂಸ್ಕೃತಿ, ಜಾಗತಿಕ ಸಂಸ್ಕೃತಿಗಳ ತೌಲನಿಕ ಚಿಂತನೆ, ಬುಡಕಟ್ಟು ಸಮಾಜ, ಗೋವಧೆ ನಿಷೇಧದ ಚಳವಳಿ, ವಿವಾಹ ವಿಚ್ಛೇದನೆಗೆ ಸಂಬಂಧಿಸಿದ ಕಾನೂನು, ಭಾಷಿಕ ಸಮಸ್ಯೆ, ಎರಡು ಪೀಳಿಗೆಯ ನಡುವಣ ಸಂಬಂಧ, ಮಹಿಳೆಯರ ಸ್ಥಿತಿಗತಿ, ಶೈಕ್ಷಣಿಕ ಸಮಸ್ಯೆ ಈ ಬಗೆಯ ಸಾರ್ವತ್ರಿಕ ವಿಷಯಗಳಿಗೆ ಸಂಬಂಧಿಸಿದ ಹತ್ತು ಲೇಖನಗಳನ್ನು ಪೋಕಳೆ ಅನುವಾದ ಮಾಡಿದ್ದಾರೆ.

ವಿಶೇಷವೆಂದರೆ ಇಲ್ಲಿರುವ ಹೆಚ್ಚಿನ ಲೇಖನಗಳು 60ರ ದಶಕಕ್ಕೂ ಹಿಂದಿನವು. ಅಂದಿನ ಕಾಲಘಟ್ಟಕ್ಕೆ, ಸಂದರ್ಭಕ್ಕೆ ಪೂರಕವಾಗಿ ಲೇಖಕಿ ಸಂಸ್ಕೃತಿಯ ಕುರಿತಂತೆ ತನ್ನ ವ್ಯಾಖ್ಯಾನವನ್ನು ಮಾಡಿದ್ದಾರೆ. ಇದಾದ ಬಳಿಕ ದೇಶದಲ್ಲಿ ಸೃಷ್ಟಿಯಾದ ಚಳವಳಿಗಳು, ಹೋರಾಟಗಳು, ರಾಜಕೀಯ ಪಲ್ಲಟಗಳು ಸಂಸ್ಕೃತಿಯನ್ನು ಬೇರೆ ಬೇರೆ ನೆಲೆಯಲ್ಲಿ ನೋಡಿವೆ. ವ್ಯಾಖ್ಯಾನಗಳಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಆದರೂ, ಮಾನವಶಾಸ್ತ್ರಜ್ಞ, ಸಮಾಜ ಶಾಸ್ತ್ರಜ್ಞೆಯರಾಗಿರುವ ಇರಾವತಿ, ಸಂಸ್ಕೃತಿಯನ್ನು ನೋಡುವ ಕ್ರಮ ಇಂದಿಗೂ ಹೊಸತೇ ಆಗಿದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಉಳಿದವರು ತಮ್ಮ ನೋಟಗಳನ್ನು ಹಿಗ್ಗಿಸಿದವರು ಹಲವರು.

ಸಂಸ್ಕೃತಿಯಲ್ಲಿರುವ ಕೆಡುಕನ್ನು ಉಚ್ಚಾಟನೆ ವಾಡುವಾಗ ವ್ಯಕ್ತಿ ಅಥವಾ ವರ್ಗದ ಬಗೆಗೆ ದ್ವೇಷವಾಗಲಿ, ಸೇಡಿನ ಭಾವನೆಯಾಗಲಿ ಇರಬಾರದು ಎನ್ನುವ ಎಚ್ಚರಿಕೆಯನ್ನು ನೀಡುತ್ತಾರೆ ಇರಾವತಿ. ನ್ಯಾಯನಿಷ್ಠುರತೆ ಎಂದರೆ ವೈರತ್ವ ಅಲ್ಲ ಎನ್ನುವುದನ್ನು ಇರಾವತಿ ಅಭಿಪ್ರಾಯಪಡುತ್ತಾರೆ. ಹಾಗೆಯೇ ಬ್ರಿಟಿಷರು ಮತ್ತು ಮುಸ್ಲಿಮರ ಸಂಸ್ಕೃತಿ ಹೇಗೆ ಈ ದೇಶದ ಮೇಲೆ ಪರಿಣಾಮ ಬೀರಿತು ಎನ್ನುವುದನ್ನೂ ಅವರು ಕುತೂಹಲಕರವಾಗಿ ನಿರೂಪಿಸುತ್ತಾರೆ. ಮಹಿಳೆಯ ಹಕ್ಕುಗಳ ಬಗ್ಗೆ ಚರ್ಚೆ ಮಾಡುತ್ತಾ, ಮಹಿಳೆಯರ ಹಕ್ಕಿನ ಭಾಷೆಯು ಹೋಗಿ, ನಾವು ಪ್ರತಿಯೊಬ್ಬ ಮನುಷ್ಯರ ಹಕ್ಕಿನ ಭಾಷೆಯ ಕುರಿತು ಮಾತನಾಡುವುದು ಸಾಧ್ಯವಾಗಬೇಕು ಎಂಬ ನಿಲುವು ತಾಳುತ್ತಾರೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 85 ರೂ.

Writer - - ಕಾರುಣ್ಯ

contributor

Editor - - ಕಾರುಣ್ಯ

contributor

Similar News