ಕತರ್ ಪ್ರಜೆಗಳಿಗೆ ಈ ಬಾರಿ ಇಲ್ಲ ಹಜ್ ಭಾಗ್ಯ

Update: 2017-08-27 03:45 GMT

ದೋಹಾ, ಆ.27: ಪವಿತ್ರ ಹಜ್ ಯಾತ್ರೆ ನಿರ್ವಹಿಸುವ ಜೀವಮಾನದ ಬಯಕೆ ಈ ಬಾರಿ ಕತರ್ ಯಾತ್ರಿಗಳ ಪಾಲಿಗೆ ಗಗನಕುಸುಮವಾಗಲಿದೆ. ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಾದ ಮಕ್ಕಾ-ಮದೀನಾವನ್ನು ಸೌದಿ ಅರೇಬಿಯಾ ನಿರ್ವಹಿಸುತ್ತಿದ್ದು, ಕತರ್‌ನ ಯಾತ್ರಿಗಳ ಕನಸಿಗೆ ತಣ್ಣೀರೆರಚಿದೆ. 

ಹಜ್ ಯಾತ್ರಿಗಳ ಪ್ರಯಾಣ ವ್ಯವಸ್ಥೆ ಅಥವಾ ಭದ್ರತಾ ಖಾತರಿ ಬಗ್ಗೆ ಸೌದಿ ಅರೇಬಿಯಾದಿಂದ ಇದುವರೆಗೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಕತರ್‌ನ ವಕ್ಫ್ ಮತ್ತು ಇಸ್ಲಾಮಿಕ್ ವ್ಯವಹಾರಗಳ ಖಾತೆ ಸಚಿವಾಲಯ ಸ್ಪಷ್ಟಪಡಿಸಿದೆ. ದೇಶದ ಪ್ರಜೆಗಳ ಹಾಗೂ ನಿವಾಸಿಗಳ ವಾರ್ಷಿಕ ಹಜ್‌ ಯಾತ್ರೆ ಆಯೋಜಿಸುವ ಹೊಣೆ ಈ ಸಚಿವಾಲಯದ್ದು.

ಕಳೆದ ಜೂನ್‌ನಲ್ಲಿ ಸೌದಿ ಅರೇಬಿಯಾ ಹಾಗೂ ಇತರ ಮೂರು ಅರಬ್ ದೇಶಗಳು ಕತರ್‌ಗೆ ನಿಷೇಧ ಹೇರಿ, ಗಲ್ಫ್ ಎಮಿರೇಟ್‌ಗಳಿಂದ ಸರಕು ಪ್ರವೇಶಿಸದಂತೆ ತಡೆ ನಿರ್ಮಿಸಿತ್ತು. "ಹಜ್ ಸಚಿವಾಲಯದಿಂದ ಯಾವುದೇ ಸಹಕಾರ ಅಥವಾ ಧನಾತ್ಮಕ ಸ್ಪಂದನೆ ಸಿಕ್ಕಿಲ್ಲ. ಇದು ಕತರ್ ಯಾತ್ರಿಗಳಲ್ಲಿ ನಿಯಂತ್ರಣ ಪ್ರಕ್ರಿಯೆ ಬಗೆಗಿನ ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗಿದೆ" ಎಂದು ಕತರ್‌ನ ಅಧಿಕೃತ ಸುದ್ದಿಸಂಸ್ಥೆ ವರದಿ ಮಾಡಿದೆ. ಸೌದಿ ಅರೇಬಿಯಾದಿಂದ ಸಂವಹನ ಹಾಗೂ ಸಹಕಾರ ಇಲ್ಲ ಎಂದರೆ 2017ರಲ್ಲಿ ಕತರ್ ನಾಗರಿಕರು ಹಜ್ ಯಾತ್ರೆ ಕೈಗೊಳ್ಳುವಂತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

"ಮುಸ್ಲಿಮರು ತಮ್ಮ ಧಾರ್ಮಿಕ ಕರ್ತವ್ಯವನ್ನು ನಿಭಾಯಿಸುವುದರಿಂದ ತಡೆಯಲಾಗಿದೆ" ಎಂದು ಕತರ್‌ನ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಂತಾರಾಷ್ಟ್ರೀಯ ಸಹಕಾರ ವಿಭಾಗದ ನಿರ್ದೇಶಕ ಸಾದ್ ಸುಲ್ತಾನ್ ಅಲ್-ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News