ಧರ್ಮಗಳ ವಕ್ತಾರರಿಂದ ದೇಶ ನಾಶ:ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು, ಆ. 27: ದೇವರು ಮತ್ತು ಧರ್ಮಗಳ ವಕ್ತಾರರಿಂದ ನಮ್ಮ ದೇಶ ಹಾಳಾಗುತ್ತಿದೆ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಹಿತಿ ಹೆಬ್ಬಗೋಡಿ ಗೋಪಾಲ್ ಮತ್ತು ಎಂ.ಜಮುನ ದತ್ತಿ ಪುಸ್ತಕ ಬಹುಮಾನ ಪ್ರದಾನ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತ್ಯಾಚಾರ ನಡೆಸಿ ಸಿಕ್ಕಬಿದ್ದ ಸ್ವಾಮಿಗಳನ್ನು ಅಥವಾ ಸ್ವಯಂ ಘೋಷಿತ ಸ್ವಾಮಿಗಳನ್ನು ಲಕ್ಷಾಂತರ ಜನರು ಬೆಂಬಲಿಸುತ್ತಿರುವುದು ನಮ್ಮ ದೇಶದ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತಕ್ಕೆ 'ಅಚ್ಛೇ ದಿನ್‌ಗಳು' ಬರುತ್ತಿವೆ ಎಂದು ಪ್ರಧಾನಿ ಭಾಷಣ ಮಾಡುತ್ತಿದ್ದಾರೆ. ಆದರೆ, ಅಚ್ಛೇ ದಿನ್‌ಗಳ ಬದಲಿಗೆ ಕೆಡುಗಾಲ ಆರಂಭವಾಗಿದೆ. ದೇಶದಾದ್ಯಂತ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಿ, ಅಮಾಯಕರನ್ನು ಹತ್ಯೆ ಮಾಡಲಾಯಿತು. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಇಲ್ಲದೆ ನೂರು ಮಕ್ಕಳು ಸಾವಿಗೀಡಾದರು. ಅಲ್ಲದೆ, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟ ಸ್ವಾಮೀಜಿ ಅನುಯಾಯಿಗಳು 32 ಜನರ ಸಾವಿಗೆ ಕಾರಣಕರ್ತರಾದರು. ಹೀಗಿರುವಾಗ ಅಚ್ಛೇದಿನ್‌ಗಳು ಎಲ್ಲಿಂದ ಬರುತ್ತವೆ ಎಂದರು.
ನಮ್ಮ ದೇಶದಲ್ಲಿನ ಜನರ ಮನಸ್ಸಿಗೆ ಯಾವ ಧರ್ಮವನ್ನು ತುಂಬಲಾಗಿದೆಯೋ ಅದೇ ನಿಜವಾದ ಧರ್ಮ ಹಾಗೂ ಯಾವುದು ಅಧರ್ಮವೆಂದು ಹೇಳಲಾಗಿದೆಯೋ ಅದೇ ನಿಜವಾದ ಅಧರ್ಮ ಎಂದು ನಂಬಿಸಲಾಗಿದೆ. ಸತ್ಯ ಮತ್ತು ಸುಳ್ಳು ಯಾವುದು ಎಂಬುದನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೂ ಕಲಿಸಲಿಲ್ಲ. ಹೀಗಾಗಿ, ಇಂದಿನ ಪೀಳಿಗೆ ಪ್ರಶ್ನೆ ಮಾಡುವ ವ್ಯಕ್ತಿತ್ವವನ್ನೇ ಬೆಳೆಸಿಕೊಂಡಿಲ್ಲ ಎಂದ ಅವರು, ಜನರ ಮುಗ್ಧತೆಯನ್ನು ಬಳಸಿಕೊಂಡು ವೌಢ್ಯದ ಮೂಲಕ ಸ್ವಾಮೀಜಿಗಳು ತಮ್ಮ ಅಧಿಪತ್ಯ ಸ್ಥಾಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ಮಠದಲ್ಲಿ ಕನ್ಯಾಸಂಸ್ಕಾರ ಹಾಗೂ ಹರಿಯಾಣದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸ್ವಾಮೀಜಿ ಒಬ್ಬರಿಗೆ ನ್ಯಾಯಾಲಯ ತಪ್ಪಿತಸ್ಥನೆಂದು ತೀರ್ಪು ನೀಡಿದರೂ ಸ್ವಾಮೀಜಿಗಳಿಗೆ ಜನ ಬೆಂಬಲ ನೀಡುತ್ತಾರೆ. ಅಂದರೆ, ನಮ್ಮ ಸಮಾಜ ಯಾವ ಕಡೆ ಸಾಗುತ್ತಿದೆ. ಹೀಗಾಗಿ ಲೇಖಕರು, ಬರಹಗಾರರು ನಮ್ಮ ದೇಶ ಯಾವ ಕಡೆ ಸಾಗುತ್ತಿದೆ. ಸತ್ಯ ಹಾಗೂ ಸುಳ್ಳು ಯಾವುದು ಎಂಬ ಅಂಶಗಳನ್ನಿಟ್ಟುಕೊಂಡು ಸಾಹಿತ್ಯ ರಚಿಸಬೇಕು. ಇಂದಿನ ಪೀಳಿಗೆಗೆ ಪ್ರಶ್ನೆ ಮಾಡುವುದನ್ನು ಕಲಿಸಬೇಕು ಎಂದು ತಿಳಿಸಿದರು.
ನಾಡೋಜ ಡಾ.ಮಹೇಶ್ ಜೋಶಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಭಾರತಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಈ ಮೂರು ಜನರು ಜಗತ್ತಿಗೆ ಮಾನವೀಯತೆಯ ಪಾಠ ಕಲಿಸಿಕೊಟ್ಟಿದ್ದಾರೆ. ಇವರನ್ನು ನಾವಿಂದು ಆದರ್ಶವಾಗಿ ಪಡೆಯಬೇಕಿದೆ ಎಂದ ಅವರು, ಬಹುಮಾನಗಳಿಗಾಗಿ ಸಾಹಿತ್ಯ ರಚಿಸಬಾರದು ಎಂದು ತಿಳಿಸಿದರು.
ಈ ವೇಳೆ ಅಲ್ಲಾಗಿರಿರಾಜ್ ಕನಕಗಿರಿ, ಎಲಿಜಬೆತ್ ಲೋಬೊ, ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ದ್ವಾರನಕುಂಟೆ ಪಾತಣ್ಣ, ಅಡ್ಲೂರು ರಾಜು, ಡಾ.ಕೆ.ವಿ.ರಾಜೇಶ್ವರಿ, ಡಾ.ಕವಿತಾ ಕೃಷ್ಣ ಸೇರಿದಂತೆ 13 ಜನರಿಗೆ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದತ್ತಿ ದಾನಿ ಹೆಬ್ಬಗೋಡಿ ಗೋಪಾಲ್, ಕವಯತ್ರಿ ಡಾ.ಬಿ. ಇಂದಿರಾದೇವಿ, ಟ್ರಸ್ಟ್‌ನ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಉಪಸ್ಥಿತರಿದ್ದರು.