ಕುಂದಣಗಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ: ಡಾ.ಹಂಪ ನಾಗರಾಜಯ್ಯ
ಬೆಂಗಳೂರು, ಆ.27: ಕುಂದಣಗಾರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಹಂ ಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಕರ್ನಾಟಕ ವಿಶ್ವಕರ್ಮ ಸಾಹಿತ್ಯ-ಕಲಾ ಅಕಾಡಮಿ ವತಿಯಿಂದ ಆಯೋಜಿಸಿದ್ದ ಪ್ರೊ.ಕೆ.ಜಿ.ಕುಂದಣಗಾರರ ಬದುಕು-ಬಹರಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕುಂದಣಗಾರರು ಆರ್ಥಿಕವಾಗಿ ದುರ್ಬಲರಾಗಿದ್ದರೂ ಎಂದೂ ಅದನ್ನು ವ್ಯಕ್ತಪಡಿಸಿಕೊಳ್ಳದೇ, ನಮ್ಮ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಪ್ರಾಚೀನ ನಾಣ್ಯಗಳ ಸಂಶೋಧನೆ, ಛಂದಸ್ಸಿ ಕ್ರಮದ ಅಧ್ಯಯನ, ಪಂಪನ ಆದಿಪುರಾಣ ಮಹಾಕಾವ್ಯದ ಸಂಗ್ರಹ ಮತ್ತು ಕೊಲ್ಲಾಪುರ ಲಕ್ಷ್ಮೀ ದೇವಾಲಯ ಇತಿಹಾಸದ ಆನಾವರಣ ಸೇರಿದಂತೆ ಅನೇಕ ಕೃತಿಗಳು ಅವರ ಅಧ್ಯಯನ ಶೀಲಕ್ಕೆ ಹಿಡಿದ ಕೈಗನ್ನಡಿ ಎಂದರು.
ಕಲಬುರಗಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಮ.ಗು.ಬಿರಾದಾರ್ ಮಾತನಾಡಿ, ಮರಾಠಿ ನೆಲದಲ್ಲಿ ಕನ್ನಡವನ್ನು ಶ್ರೀಮಂತಗೊಳಿಸಿದ ವ್ಯಕ್ತಿ. ಕನ್ನಡದ ಪ್ರಥಮ ಸಾಲಿನ ಸಂಶೋಧಕರು, ಹಳೆಗನ್ನಡ, ವೀರಶೈವ ಸಾಹಿತ್ಯದ ಸಂಶೋಧನೆ, ಛಂದಸ್ಸು ಮತ್ತು ಅಲಂಕಾರಗಳನ್ನು ಇಂಗ್ಲಿಷ್ ಭಾಷೆಗೆ ಕುಂದಣಗಾರರು ತರ್ಜುಮೆ ಮಾಡಿದ್ದಾರೆ ಎಂದು ತಿಳಿಸಿದರು.
43 ಹಳೆ ಗನ್ನಡ ಶಾಸನ ಇಂಗ್ಲಿಷ್ ಭಾಷೆ ಭಾಷಾಂತರಿಸುವುದರ ಜೊತೆಗೆ 50ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಜಾನಪದಲ್ಲಿ ಪಿಎಚ್‌ಡಿ ಪಡೆಯಲು ಅವಕಾಶ ಮಾಡಿಕೊಟ್ಟು, ಜಾನಪದ ಅಕಾಡಮಿ ಸ್ಥಾಪನೆಗೆ ಮುಂದಾಗಿದ್ದು ಅವರ ಭಾಷಾ ಸಾಹಿತ್ಯ ನೀಡಿದ ಕೊಡುಗೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಅನೇಕ ಪ್ರಥಮಗಳಿಗೆ ನಾಂದಿ ಕುಂದಣಗಾರಿಗೆ ಕನ್ನಡ ಸಾಹಿತ್ಯಲೋಕ ಮತ್ತು ಸಾಹಿತ್ಯ ಪರಿಷತ್ತು ಸೂಕ್ತ ಗೌರವ ನೀಡದೆ ಮೂಲೆಗುಂಪು ಮಾಡಿದೆ. ದೊಡ್ಡ ಸಾಧನೆ ಮಾಡಿದ ವ್ಯಕ್ತಿಗಳನ್ನು ನಮ್ಮ ಸಮಾಜ ಗುರಿತಿಸಿದ್ದು ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮ.ಗು. ಬಿರಾದಾರ್ ಅವರನ್ನು ಸನ್ಮಾಸಲಾಯಿತು.
ಕಾರ್ಯಕ್ರಮದಲ್ಲಿ ಅಕಾಡಮಿ ಅಧ್ಯಕ್ಷೆ ಪ್ರೊ.ಎನ್.ವಿ.ಅಂಬಾಮಣಿಮೂರ್ತಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ಯು.ಮಂಜುನಾಥ್, ಡಾ.ವೈ.ಸಿ.ಭಾನುಮತಿ, ಪ್ರಾಧ್ಯಾ ಪಕ ಡಾ.ಕೆ.ಪಿ.ಈರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.