ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಒಡೆಯುವ ಕೆಲಸಕ್ಕೆ ಎಂದೂ ಕೈಹಾಕಲ್ಲ: ಈಶ್ವರಾನಂದಪುರ ಸ್ವಾಮೀಜಿ
ಬೆಂಗಳೂರು, ಆ. 27: ‘ಲಿಂಗಾಯತ ಪ್ರತ್ಯೇಕ ಧರ್ಮ’ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮ-ಜಾತಿಗಳನ್ನು ಒಡೆಯುತ್ತಿದ್ದಾರೆಂಬ ಆರೋಪ ಸಲ್ಲ. ಅವರು ಹಾಲು ಮತದವರು. ಅವರೆಂದೂ ಜಾತಿ ಹಾಗೂ ಧರ್ಮ ಒಡೆಯುವ ಕೆಲಸ ಮಾಡುವುದಿಲ್ಲ ಎಂದು ಹೊಸದುರ್ಗದ ಕಾಗಿನೆಲೆ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ಇಲ್ಲಿನ ಆರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘ಹಾಲು ಕೆಟ್ಟರೂ ಹಾಲು ಮತದವರು ಕೆಡುವುದಿಲ್ಲ’. ಹಾಗೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಜಾತಿಗಳನ್ನು ಒಡೆಯುವುದಿಲ್ಲ. ಗೊಂದಲ ಇರುವುದು ಲಿಂಗಾಯತರಲ್ಲಿ. ಹೀಗಾಗಿ, ವಿನಾಕಾರಣ ಸಿದ್ದರಾಮಯ್ಯರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಮುಖ್ಯಮಂತ್ರಿಯಾಗಿ ಅವರು ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಮನವಿ ಸ್ವೀಕರಿಸಿದ್ದಾರೆ. ಮನವಿ ಸ್ವೀಕರಿಸಿದ ತಕ್ಷಣ ಅವರು ಜಾತಿ-ಧರ್ಮ ಒಡೆಯುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದು, ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರ ಎಂದು ಟೀಕಿಸಿದರು.
ಕುರಿ ಹೊಲಸು ತಿನ್ನಲ್ಲ, ಕುರುಬ ಮಾತಿಗೆ ತಪ್ಪಲ್ಲ, ಹಾಗೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಲಸು ತಿನ್ನುವ ಕೆಲಸ ಮಾಡುವುದಿಲ್ಲ. ಹಾಲು ಮತದ ಸಮಾಜದವರು ಯಾವತ್ತೂ ಒಳ್ಳೆಯ ಕೆಲಸವನ್ನು ಮಾಡುವರು. ಸಿದ್ದರಾಮಯ್ಯನವರು ಬಸವಣ್ಣ ಹಾಗೂ ಕನಕನ ಆದರ್ಶ, ಆಶಯದಂತೆ ಅಧಿಕಾರ ನಡೆಸುತ್ತಿದ್ದಾರೆಂದು ಅವರು ಹೇಳಿದರು.
ಅಪರೂಪಕ್ಕೆ ಹಿಂದುಳಿದ ನಾಯಕರೊಬ್ಬರಿಗೆ ಅಧಿಕಾರ ಸಿಕ್ಕಿದೆ. ಎಲ್ಲರಲ್ಲೂ ಸಹನೆ ಇರಬೇಕು. ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಟೀಕೆ-ಆರೋಪಗಳಿಗೆ ಎದೆಗುಂದಬಾರದು. ಇಡೀ ಅಹಿಂದ ವರ್ಗ ಅವರ ಜೊತೆ ಇದೆ ಎಂದ ಅವರು, ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕ ಜಾಗೃತಿಯಾಗಬೇಕು. ಶಿಕ್ಷಣ ಇಲ್ಲದೆ, ಸಂಘಟನೆ ಇಲ್ಲದೆ ಸಮುದಾಯ ಬೆಳೆಯಲು ಸಾಧ್ಯವಿಲ್ಲ ಎಂದರು.
ಈ ವೇಳೆ ಎಸೆಸೆಲ್ಸಿ-ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳು, ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಎಂಟಿಬಿ ನಾಗರಾಜ್, ವರ್ತೂರು ಪ್ರಕಾಶ್, ಮೇಲ್ಮನೆ ಸದಸ್ಯರಾದ ಎಚ್.ಎಂ.ರೇವಣ್ಣ, ಭೈರತಿ ಸುರೇಶ್, ಮಾಜಿ ಮೇಯರ್‌ಗಳಾದ ಹುಚ್ಚಪ್ಪ, ರಾಮಚಂದ್ರಪ್ಪ, ವೆಂಕಟೇಶ ಮೂರ್ತಿ, ಸಂಘದ ಅಧ್ಯಕ್ಷ ಯಮುನಪ್ಪ ಸಣ್ಣಕ್ಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.