×
Ad

ಮೂಕಿ ಮಗಳನ್ನು ಮಹಡಿಯಿಂದ ಕೆಳಗೆ ತಳ್ಳಿ ಕೊಂದ ತಾಯಿ

Update: 2017-08-27 20:20 IST

ಬೆಂಗಳೂರು, ಆ.27: ತಾಯಿಯೊಬ್ಬಳು ತನ್ನ ಒಂಬತ್ತು ವರ್ಷದ ಮೂಕಿ ಮಗಳನ್ನು 3ನೆ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಗರದ ಜೆಪಿ ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಸ್ವಾತಿ ತನ್ನ ಮಗಳಾದ ಶ್ರೇಯಾಳನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾಳೆ. ಸಾವಿಗೀಡಾಗಿರುವ ಶ್ರೇಯಾ ಮೂಕಿಯಾಗಿದ್ದು, ಮಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ಸಂಜೆ ಸ್ವಾತಿ ಹಾಗೂ ಮಗಳು ಶ್ರೇಯಾ ನಡುವೆ ಮುನಿಸಿನ ವಾಗ್ವಾದ ನಡೆದ ಸಂದರ್ಭದಲ್ಲಿ ಆರೋಪಿ ಸ್ವಾತಿ ಈ ಕೃತ್ಯ ನಡೆಸಿದ್ದಾಳೆ.

ಆರೋಪಿ ಸ್ವಾತಿ ತನ್ನ ಮಗಳನ್ನು 3ನೆ ಮಹಡಿಯಿಂದ ತಳ್ಳಿದ ದೃಶ್ಯವನ್ನು ನೋಡಿದ ಸ್ಥಳೀಯರು ಶ್ರೇಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು. ಆದರೆ, ಮೂರನೆ ಮಹಡಿಯಿಂದ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಆರೋಪಿ ಸ್ವಾತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News