ವಿದ್ಯಾರ್ಥಿಗಳು ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲು ಸಂಕಲ್ಪ ತೋಡಬೇಕಿದೆ: ಇಮ್ತಿಯಾಝ್ ಎ.ಸಿದ್ದೀಕಿ
ಬೆಂಗಳೂರು,ಆ. 27: ವಿದ್ಯಾರ್ಥಿಗಳು ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲು ಸಂಕಲ್ಪ ತೋಡಬೇಕಿದೆ ಎಂದು ಝಕಾತ್ ಫೌಂಡೇಶನ್ ಅಧ್ಯಕ್ಷ ಇಮ್ತಿಯಾಝ್ ಎ.ಸಿದ್ದೀಕಿ ಹೇಳಿದ್ದಾರೆ.
ರವಿವಾರ ನಗರದ ಫಿರೋಝ್ ಎಸ್ಟೇಟ್‌ನಲ್ಲಿ ದಾನಿಶ್ ಎಜ್ಯುಕೇಶನ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಾನವತೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ದೇಶದ ಐಕ್ಯತೆಯನ್ನು ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಪ್ರಾಮಾಣಿಕ ಸೇವೆ ಮಾಡಲು ಭಾದ್ಯತೆ ಹೊರಬೇಕು ಎಂದರು.
ಕಂದಾಯ ಅಧಿಕಾರಿ ಶೇಖ್ ಅಮೀನ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶ ಸೇವೆ ಮಾಡಲು ಸ್ಪರ್ಧಾತ್ಮಕ ಪರೀಕ್ಷಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಾನಿಶ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಹುಸ್ನಾ ಶರೀಪ್,ಕಾರ್ಯದರ್ಶಿ ಫಿರೋಝ್ ಅಬ್ದುಲ್ಲಾ ಸೇರಿದಂತೆ ಇತರರು ಇದ್ದರು.