ಗಡಿ ಜಿಲ್ಲೆಗಳಲ್ಲಿ ಕನ್ನಡ ಅವಸಾನದ ಅಂಚಿನಲ್ಲಿದೆ: ಮಾಯಣ್ಣ
ಬೆಂಗಳೂರು, ಆ. 27: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆ ಅವಸಾನದ ಅಂಚಿನಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಗೀತಗಾಯನ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿವೆುಯಾಗುತ್ತಿದೆ. ಹೀಗಾಗಿ, ಕನ್ನಡ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮುತುರ್ವಜಿ ವಹಿಸಬೇಕು ಎಂದು ಹೇಳಿದರು.
ಕನ್ನಡ ಭಾಷೆ ಉಳಿಸುವುದು ಒಬ್ಬರಿಂದ ಆಗುವ ಕೆಲಸವಲ್ಲ. ಎಲ್ಲರೂ ಕ್ರೀಯಾಶೀಲವಾಗಿ ಕನ್ನಡದ ಕೆಲಸ ಮಾಡಬೇಕು. ಅದಕ್ಕಾಗಿ ಕಸಾಪದಿಂದ ನಗರದಾದ್ಯಂತ ಎಲ್ಲ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಕೆಲಸ ಮಾಡುವವರನ್ನು ಗುರುತಿಸಲಾಗುತ್ತದೆ. ಅವರನ್ನು ಪ್ರತಿ ಹಂತದಲ್ಲಿಯೂ ಹುರಿದುಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಪರಭಾಷಿಕರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ, ಕನ್ನಡ ನಾಡಿಗೆ ವಲಸೆ ಬರುವ ಎಲ್ಲರೂ ನಮ್ಮವರೇ ಆಗಿರುವುದರಿಂದ ಅವರನ್ನು ಪ್ರೀತಿಯಿಂದ ಬರ ಮಾಡಿಕೊಂಡು ಅವರಿಗೆ ಕನ್ನಡ ಕಲಿಸುವುದರ ಮೂಲಕ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಸಮ್ಮೇಳನ: ತಮಿಳುನಾಡಿನ ಗಡಿ ಭಾಗದಲ್ಲಿ ಕನ್ನಡ ಉಳಿಸಬೇಕಾದ ಅಗತ್ಯವಿದೆ. ಹೀಗಾಗಿ, ಕನ್ನಡದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 13 ನೆ ಬೆಂಗಳೂರು ನಗರ ಜಿಲ್ಲಾ ಸಮ್ಮೇಳನವನ್ನು ಸಾ.ರಾ.ಗೋವಿಂದು ಅಧ್ಯಕ್ಷತೆಯಲ್ಲಿ ಡಿ.24 ಮತ್ತು 25 ರಂದು ತಮಿಳುನಾಡು ಗಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಾದಯಾತ್ರೆ: ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ 1ರಿಂದ 10 ನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಎಂದು ಸುಗ್ರ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿ ಜನವರಿಯಲ್ಲಿ ಬಿಡದಿ ಸಮೀಪದ ಕುಂಬಳಗೋಡಿನಿಂದ ಹೊಸಕೋಟೆವರೆಗೆ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ವೇಳೆ ರಂಗಕರ್ಮಿ ರಂಗಸ್ವಾಮಿ ಹಾಗೂ ಎಸ್.ಲೋಕೇಶ್‌ಗೆ ‘ಕ್ರೀಯಾಶೀಲ ನಮ್ಮ ಕನ್ನಡ ನಾಯಕರು ಪ್ರಶಸ್ತಿ’, ಶ್ರೀಧರ ರಾಯಸಂ ಮತ್ತು ಆರ್.ಗೀತಾ, ಕೆ.ಇ.ಸುಂದರ ಪ್ರಕಾಶ್ ಮತ್ತು ಜಿ.ನಾಗರತ್ನಮ್ಮ, ಬಿ.ಎನ್.ಹರೀಶ್ ಮತ್ತು ಕಮಲ ಇವರಿಗೆ ‘ಆದರ್ಶ ದಂಪತಿ ಪ್ರಶಸ್ತಿ’ ನೀಡಿಲಾಯಿತು.
ಇರ್ಷಾನ್ ಅಹಮ್ಮದ್ ಶೇಕ್, ಸೆಲ್ವಕುಮಾರ್, ಆರ್.ಬನಪ್ಪ, ರಾಜುಪವಾರ್ ಇವರಿಗೆ ‘ಆದರ್ಶ ಕನ್ನಡಿಗ’, ಎಚ್.ಕೆ.ರಾಜೇಶ್ವರಿಗೆ ‘ಉದಯೋನ್ಮುಕ ಕವಯತ್ರಿ’ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಗೌರವಾಧ್ಯಕ್ಷ ಎಂ.ತಿಮ್ಮಯ್ಯ ಹಾಗೂ ಬಿ.ಶೃಂಗೇಶ್ವರ ಉಪಸ್ಥಿತರಿದ್ದರು.