ಕ್ರೈಸ್ತ ಸಂಘಟನೆಯ ಮನವಿಗೆ ಪುರಸ್ಕಾರ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್
ಬೆಂಗಳೂರು, ಆ.27: 1950ರ ರಾಷ್ಟ್ರಪತಿ ಆದೇಶ ಎಂದೇ ಕರೆಯಲಾಗುವ ಸಂವಿಧಾನದ 341ನೇ ವಿಧಿಯ 3ನೇ ಪ್ಯಾರದ ಸಿಂಧುತ್ವವನ್ನು ಪ್ರಶ್ನಿಸಿ ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್(ಎಐಸಿಯು) ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ಎಐಸಿಯು ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿ’ಕುನ್ಹ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧಿಯು ದಲಿತ ಕ್ರಿಶ್ಚಿಯನ್ನರಿಗೆ ಮತ್ತು ಮುಸ್ಲಿಮರಿಗೆ ಮೀಸಲಾತಿ ಸೇರಿದಂತೆ ಹಲವು ಸವಲತ್ತುಗಳನ್ನು ನಿರಾಕರಿಸಿದೆ. ಇದನ್ನು ದುರುಪಯೋಗ ಪಡಿಸಿಕೊಂಡಿರುವ ಆರೆಸ್ಸೆಸ್ ಹಾಗೂ ವಿಎಚ್‌ಪಿ ಮುಂತಾದ ಹಿಂದು ಸಂಘಟನೆಗಳು ‘ಘರ್ ವಾಪಸಿ’ ಎಂಬ ಹೆಸರಿನಲ್ಲಿ ಮತಾಂತರ ಕಾರ್ಯದಲ್ಲಿ ತೊಡಗಿದ್ದಾರೆ . ಆದ್ದರಿಂದ ಈ ಬಗ್ಗೆ ತ್ವರಿತ ವಿಚಾರಣೆ ನಡೆಸಬೇಕು ಎಂದು ಎಐಸಿಯು ಮಾಜಿ ಅಧ್ಯಕ್ಷ ಡಾ ಜಾನ್ ದಯಾಳ್ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ ಎಂದವರು ತಿಳಿಸಿದರು. ಹಿಂದು, ಸಿಖ್ ಅಥವಾ ಬೌದ್ಧ ಧರ್ಮದಿಂದ ವಿಭಿನ್ನವಾಗಿರುವ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಪರಿಶಿಷ್ಟ ಜಾತಿಗೆ ಸೇರಿದವನೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಂವಿಧಾನದ 341ನೇ ವಿಧಿಯ 3ನೇ ಪ್ಯಾರಾದಲ್ಲಿ ತಿಳಿಸಲಾಗಿದ್ದು ಇದನ್ನು ಹಿಂದು ಸಂಘಟನೆಗಳು ದುರುಪಯೋಗಪಡಿಸಿಕೊಂಡು ಮತಾಂತರ ಕಾರ್ಯದಲ್ಲಿ ತೊಡಗಿವೆ ಎಂದವರು ದೂರಿದರು.
ಅಲ್ಲದೆ ಇತ್ತೀಚೆಗೆ ಜಾರ್ಖಂಡ್ ರಾಜ್ಯ ವಿಧಾನಸಭೆಯಲ್ಲಿ ಧರ್ಮ ವಿರೋಧಿ ಮತಾಂತರ ಮಸೂದೆ ಮಂಡಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು. ಅಲ್ಲದೆ ಇತ್ತೀಚೆಗೆ ಗೋವದಲ್ಲಿ ನಡೆದ ಸಂಘಪರಿವಾರದ ಕಾರ್ಯಕಾರಿಣಿ ಸಭೆಯಲ್ಲಿ ಇತರ ಧರ್ಮೀಯರ ಬಗ್ಗೆ ದ್ವೇಷಪೂರಿತ ಭಾಷಣ ಮಾಡಿರುವುದು ಖಂಡನೀಯ. ಈ ಕುರಿತು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಎಐಸಿಯು ವಕ್ತಾರ ಡಾ ಜಾನ್ ದಯಾಳ್ ಮತ್ತಿತರರು ಉಪಸ್ಥಿತರಿದ್ದರು.