ಟೆಸ್ಟ್ ಕ್ರಿಕೆಟ್‌ನಲ್ಲಿ 250ನೆ ವಿಕೆಟ್ ಪಡೆದ ನಥಾನ್ ಲಿಯಾನ್ 2ನೆ ಆಸೀಸ್ ಸ್ಪಿನ್ನರ್

Update: 2017-08-27 18:29 GMT

ಢಾಕಾ, ಆ.27: ಆಸ್ಟ್ರೇಲಿಯದ ಖ್ಯಾತ ಸ್ಪಿನ್ನರ್ ನಥಾನ್ ಲಿಯಾನ್ ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನವಾಗಿರುವ ರವಿವಾರ 250 ವಿಕೆಟ್ ಪಡೆದ ಆಸ್ಟ್ರೇಲಿಯದ ಎರಡನೆ ಸ್ಪಿನ್ನರ್ ಆಗಿ ದಾಖಲೆ ಬರೆದಿದ್ದಾರೆ.

  68ನೆ ಟೆಸ್ಟ್ ಪಂದ್ಯವನ್ನಾಡುತ್ತಿರುವ ಲಿಯಾನ್ ಅವರು 79ಕ್ಕೆ 3 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ. ಬಾಂಗ್ಲಾದ ತೈಜುಲ್ ಇಸ್ಲಾಂ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ ಲಿಯಾನ್ 250 ವಿಕೆಟ್‌ಗಳ ಮೈಲುಗಲ್ಲು ಮುಟ್ಟಿದರು.

ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಅವರ ಬಳಿಕ ಈ ಸಾಧನೆ ಮಾಡಿದ ಎರಡನೆ ಸ್ಪಿನ್ನರ್ ಲಿಯಾನ್.

  ಲಿಯಾನ್ 250ನೆ ವಿಕೆಟ್ ಪಡೆದ ಆಸ್ಟ್ರೇಲಿಯದ 8ನೆ ಬೌಲರ್ ಆಗಿದ್ದಾರೆ. ಶೇನ್ ವಾರ್ನ್(708), ಗ್ಲೆನ್ ಮೆಕ್‌ಗ್ರಾತ್(563), ಡೆನ್ನಿಸ್ ಲಿಲ್ಲಿ(355), ಮಿಚೆಲ್ ಜಾನ್ಸನ್ (313), ಬ್ರೆಟ್ ಲೀ(310), ಕ್ರೇಗ್ ಮೆಕ್‌ಡರ್ಮೆಟ್ (291) ಮತ್ತು ಜಾಸನ್ ಗಿಲಿಸ್ಪಿ (259) ಈ ಸಾಧನೆ ಮಾಡಿದ ಆಸ್ಟ್ರೇಲಿಯದ ಬೌಲರ್‌ಗಳು

ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ 13ನೆ ಸ್ಪಿನ್ನರ್ ಲಿಯಾನ್.

ಬಾಂಗ್ಲಾ 260ಕ್ಕೆ ಆಲೌಟ್: ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ಮೊದಲ ಇನಿಂಗ್ಸ್‌ನಲ್ಲಿ 78.5 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲೌಟಾಗಿದೆ.

ಬಾಂಗ್ಲಾ ತಂಡದ ತಮೀಮ್ ಇಕ್ಬಾಲ್(71) ಮತ್ತು ಶಕೀಬ್ ಅಲ್ ಹಸನ್(84) ಅರ್ಧಶತಕ ದಾಖಲಿಸಿದರು.

 4 ಓವರ್‌ಗಳಲ್ಲಿ 10 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡಕ್ಕೆ ನಾಲ್ಕನೆ ವಿಕೆಟ್‌ಗೆ ತಮೀಮ್ ಇಕ್ಬಾಲ್ ಮತ್ತು ಶಾಕೀಬ್ ಅಲ್ ಹಸನ್ ಅವರು 155 ರನ್‌ಗಳ ಜೊತೆಯಾಟ ನೀಡಿದರು.

ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್, ನಥಾನ್ ಲಿಯಾನ್ ಮತ್ತು ಅಸ್ಟನ್ ಅಗರ್ ತಲಾ 3 ವಿಕೆಟ್ ಹಂಚಿಕೊಂಡರು. ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು. ಆಸ್ಟ್ರೇಲಿಯ 18/3: ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 18 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News