ಚಲನಚಿತ್ರಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬಹುದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆ. 28: ಚಲನಚಿತ್ರಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬಹುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದ ಬಾಪೂಜಿ ಸಭಾಂಗಣದಲ್ಲಿ ‘ಹೆಬ್ಬೆಟ್ ರಾಮಕ್ಕ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ‘ಕ್ಲ್ಯಾಪ್’ ಮಾಡಿ ಬಳಿಕ ಅವರು ಮಾತನಾಡಿದರು.
ಚಲನಚಿತ್ರ ಬಹುಜನರಿಗೆ ಮುಟ್ಟುವ ಮಾಧ್ಯಮವಾಗಿದೆ. ಹೀಗಾಗಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು. ಇದರ ಜತೆಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬಹುದೆಂದು ಸಿದ್ದರಾಮಯ್ಯ ನುಡಿದರು.
ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಒದಗಿಸಲಾಗಿದೆ. ಸಂಸತ್ ಸದಸ್ಯರಿಗೆ, ವಿಧಾನಸಭಾ ಸದಸ್ಯರಿಗೆ ವಿದ್ಯಾರ್ಹತೆ ನಿಗದಿಯಾಗಿಲ್ಲದ ಕಾರಣ ಪಂಚಾಯತ್ ಸದಸ್ಯರಿಗೆ ವಿದ್ಯಾರ್ಹತೆ ಬೇಕಾಗಿಲ್ಲ. ಏನೇ ಇರಲಿ ಶೇ.50 ರಷ್ಟಿರುವ ಮಹಿಳೆಯರು ಆಡಳಿತದಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.
‘ಹೆಬ್ಬೆಟ್ ರಾಮಕ್ಕ’ ಚಲನಚಿತ್ರ ಮಹಿಳಾ ರಾಜಕೀಯ ಮೀಸಲಾತಿಯನ್ನು ಕುರಿತದ್ದಾಗಿದೆ ಎಂದು ಭಾವಿಸಿದ್ದೇನೆ. ಜನಪ್ರತಿನಿಧಿಯಾಗಲು ಯಾವ ವಿದ್ಯಾರ್ಹತೆಯೂ ನಿಗದಿಯಾಗಿಲ್ಲ. ಹೆಬ್ಬೆಟ್ ರಾಮಕ್ಕ ರಾಜಕೀಯವಾಗಿ ಉತ್ತಮ ಕೆಲಸ ಮಾಡುವ ಸಂದೇಶ ಚಿತ್ರದಲ್ಲಿದೆ ಎಂದು ಅಂದುಕೊಂಡಿದ್ದೇನೆ ಎಂದ ಅವರು, ಈ ಸಿನೆಮಾದಲ್ಲಿ ಉತ್ತಮ ಅಂಶಗಳು ಮೂಡಿಬರಲಿ, ಹಿರಿಯ ನಟ ದೇವರಾಜ್ ಹಾಗೂ ನಟಿ ತಾರಾ ಸೇರಿದಂತೆ ನುರಿತ ಕಲಾವಿದರು ಚಿತ್ರದಲ್ಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಚಿತ್ರದ ನಿರ್ದೇಶಕ ಎನ್.ಆರ್. ನಂಜುಂಡೇಗೌಡ, ನಿರ್ಮಾಪಕ ಎಸ್.ಎ.ಪುಟ್ಟರಾಜು, ನಟ ದೇವರಾಜ್, ನಟಿ ತಾರಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.