×
Ad

ಕಲಬುರ್ಗಿ ಹತ್ಯೆ ಪ್ರಕರಣ: ಕ್ಷಿಪ್ರಗತಿಯ ತನಿಖೆಗೆ ಮುಖ್ಯಮಂತ್ರಿ ಸೂಚನೆ

Update: 2017-08-28 20:42 IST

ಬೆಂಗಳೂರು, ಆ.28: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರನ್ನು 2015ರ ಆಗಸ್ಟ್ 30ರಂದು ಅವರ ಮನೆಯಲ್ಲಿ ಅಪರಿಚಿತ ಹಂತಕರು ಗುಂಡಿಕ್ಕಿ ಕೊಂದು ಸಾರಸತ್ವ ಲೋಕದಲ್ಲಿ ತಲ್ಲಣ ಉಂಟು ಮಾಡಿದ್ದು ಇದೀಗ ಕರಾಳ ಇತಿಹಾಸ. ನಮ್ಮ ತನಿಖಾ ತಂಡವು ಈ ಅಪರಾಧವನ್ನು ಬಗೆಹರಿಸುವಲ್ಲಿ ಅಂತಿಮ ಘಟ್ಟ ತಲುಪಿದೆ. ತನಿಖೆಯನ್ನು ಕ್ಷಿಪ್ರ ಗತಿಯಲ್ಲಿ ನಡೆಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ, ಕಲಬುರ್ಗಿ ಹತ್ಯೆಗೆ ತೀವ್ರವಾಗಿ ಪ್ರತಿಕ್ರಿಯಿಸಿ ಹಲವು ಬರಹಗಾರರರು ತಮಗೆ ಸಂದಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ನಾಗರಿಕ ಸಂಘ-ಸಂಸ್ಥೆಗಳು ಕಳವಳವನ್ನು ವ್ಯಕ್ತಪಡಿಸಿದ್ದರು.
ರಾಜ್ಯ ಸರಕಾರವು ಹಂತಕರನ್ನು ಪತ್ತೆ ಹಚ್ಚಲು ಕೂಡಲೇ ಕ್ರಮಗಳನ್ನು ಕೈಗೊಂಡು ಎಸ್ಪಿ ದರ್ಜೆಯ ಇಬ್ಬರು, 27 ಇತರೆ ಅಧಿಕಾರಿಗಳು ಹಾಗೂ 30 ತಾಂತ್ರಿಕ ವಿಶ್ಲೇಷಕರ ಸಮರ್ಥ ತಂಡವನ್ನು ರಚಿಸಿ, ತನಿಖೆಯನ್ನು ಚುರುಕುಗೊಳಿಸಲು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ತನಿಖಾ ತಂಡವು ಕಲೆ ಹಾಕಿದ ಎಲ್ಲ ಮಾಹಿತಿಯನ್ನು ವಿಶ್ಲೇಷಿಸಿ ಮಹಾರಾಷ್ಟ್ರದಲ್ಲಿ ಇದೇ ಮಾದರಿಯಲ್ಲಿ ನಡೆದಿರುವ ಡಾ.ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ತಂಡಗಳೊಂದಿಗೆ ರಾಜ್ಯದ ತನಿಖಾ ತಂಡವು ನಿರಂತರ ಸಂಪರ್ಕದಲ್ಲಿದೆ. ಈ ಎರಡೂ ತಂಡಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಸಾಮ್ಯತೆಗಳಿವೆ ಎಂಬುದನ್ನು ಗಮನಿಸಿವೆ ಎಂದು ಅವರು ತಿಳಿಸಿದ್ದಾರೆ.

ಐತಿಹಾಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನ ದೃಷ್ಟಿಕೋನವನ್ನು ಹೊಂದಿರುವ ಬುದ್ದಿ ಜೀವಿಗಳ ಮೇಲೆ ದಾಳಿ ಈ ಅಪರಾಧದ ಹಿಂದಿನ ಉದ್ದೇಶ ಎಂಬುದು ಸಾಬೀತಾಗಿದೆ. ಕಳೆದ ವರ್ಷ ನಾಗರಿಕರ ಹಲವು ನಿಯೋಗಗಳು ನನ್ನಲ್ಲಿ ಹಾಗೂ ಗೃಹ ಇಲಾಖೆಯಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ. ಅವರ ಭಾವನೆಗಳನ್ನು ಗಮನದಲ್ಲಿರಿಸಿ ಅಪರಾಧಿಗಳನ್ನು ಹಿಡಿಯಲು ರಾಜ್ಯ ಸರಕಾರವು ತನ್ನ ಸಂಪೂರ್ಣ ಬದ್ಧತೆ ಪ್ರದರ್ಶಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಮುಖ್ಯಮಂತ್ರಿ ಎಂದಿದ್ದಾರೆ.

ನಮ್ಮ ರಾಜ್ಯವು ಚಿಂತಕರು ಹಾಗೂ ಸಮಾಜ ಸುಧಾರಕರ ಒಂದು ಸುದೀರ್ಘ ಪರಂಪರೆಯನ್ನು ಹೊಂದಿದೆ. ಶಾಂತಿಯುತ ಹಾಗೂ ಸುವ್ಯವಸ್ಥಿತ ರಾಜ್ಯ ಎಂಬ ಹೆಸರನ್ನು ಗಳಿಸಿದೆ. ರಾಜ್ಯದ ಜನತೆ ಬರಹಗಾರರನ್ನು ಮತ್ತು ಚಿಂತಕರನ್ನು ಗೌರವಯುತವಾಗಿ ಕಂಡಿದೆ. ಇದು ರಾಜ್ಯದಲ್ಲಿ ಸಾಹಿತ್ಯ ಮತ್ತು ಕಲೆ ಪಸರಿಸಲು ಸಹಾಯಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮಬಹುಮುಖಿ ಸಾಂಸ್ಕೃತಿಕ ಪರಂಪರೆಯ ಪ್ರಾಮುಖ್ಯತೆಯನ್ನು ಗಣನೆಗೆ ತೆಗೆದುಕೊಂಡಿರುವ ನಮ್ಮ ಸರಕಾರವು ರಾಜ್ಯದಲ್ಲಿ ಅಸಹಿಷ್ಣುತೆಯನ್ನು ಹರಡುವುದನ್ನು ಬಲವಾಗಿ ಕಿತ್ತೊಗೆಯಲಿದೆ. ಅಲ್ಲದೆ, ಅಂದಾಭಿಮಾನದ ದೃಷ್ಟಿ ಹೊತ್ತು ಬರಹಗಾರರು ಹಾಗೂ ಬುದ್ಧಿ ಜೀವಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಠಿಸುವವರನ್ನು ಮಟ್ಟ ಹಾಕಲಿದೆ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 30 ರಂದು ಕಲಬುರ್ಗಿ ಅವರ ಕಗ್ಗೊಲೆಯ ಎರಡನೇ ವರ್ಷದ ಕಹಿ ನೆನಪಿನ ಸಂದರ್ಭದಲ್ಲಿ ವಿಶೇಷವಾಗಿ ಸಭೆಗಳನ್ನು ಆಯೋಜಿಸುವವರಿಗೆ ಅಪರಾಧಿಗಳನ್ನು ಹಿಡಿಯುವಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲು ಇಚ್ಛಿಸುತ್ತೇನೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ತನಿಖಾ ತಂಡದ ಜೊತೆಗೆ ಕರ್ನಾಟಕ ತನಿಖಾ ತಂಡವು ಮತ್ತಷ್ಟು ಸಹಕಾರವನ್ನು ಹೆಚ್ಚಿಸಿಕೊಳ್ಳುವಂತೆ ಹಾಗೂ ಎಲ್ಲ ಮಾಹಿತಿಗಳನ್ನು ಸಮೀಪದ ದೃಷ್ಟಿಕೋನದಿಂದ ಪರಿಶೀಲಿಸಬೇಕೆಂದು ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News